ಸಿಬಿಐ ದುರ್ಬಳಕೆ ಖಂಡಿಸಿ ಪ್ರತಿಭಟನೆ: ದಿನದ ಮಟ್ಟಿಗೆ ರಾಜ್ಯಸಭೆ ಮುಂದೂಡಿಕೆ
ಹೊಸದಿಲ್ಲಿ,ಜ.7: ಸಿಬಿಐ ದುರುಪಯೋಗವನ್ನು ಖಂಡಿಸಿ ಪ್ರತಿಪಕ್ಷಗಳ ಪ್ರತಿಭಟನೆ ಮತ್ತು ರಫೇಲ್ ಒಪ್ಪಂದ ಕುರಿತು ಜೆಪಿಸಿ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರಿಂದ ಘೋಷಣೆಗಳಿಂದಾಗಿ ಸೋಮವಾರ ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು,ಸದನವನ್ನು ದಿನದ ಮಟ್ಟಿಗೆ ಮುಂದೂಡುವಂತಾಯಿತು.
ಬೆಳಿಗ್ಗೆ ಸದನದ ಕಲಾಪಗಳು ಆರಂಭಗೊಳ್ಳುತ್ತಿದ್ದಂತೆಯೇ ತಮ್ಮ ಆಸನಗಳಿಂದ ಎದ್ದು ನಿಂತ ಎಸ್‌ಪಿ ಮತ್ತು ಬಿಎಸ್‌ಪಿ ಸದಸ್ಯರು,2012-16ರ ನಡುವೆ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶ ಸರಕಾರದಲ್ಲಿ ಗಣಿಗಾರಿಕೆ ಖಾತೆಯನ್ನು ಹೊಂದಿದ್ದಾಗ ನಡೆದಿವೆಯೆನ್ನಲಾದ ಕಿರು ಖನಿಜಗಳ ಗಣಿಗಾರಿಕೆಯಲ್ಲಿನ ಅಕ್ರಮಗಳ ಕುರಿತು ಸಿಬಿಐ ತನಿಖೆಯನ್ನು ಆರಂಭಿಸಿರುವುದು ರಾಜಕೀಯ ಪ್ರತೀಕಾರವಾಗಿದೆ ಎಂದು ಆರೋಪಿಸಿ ಗದ್ದಲವನ್ನೆಬ್ಬಿಸಿದರು. ಇದೇ ವೇಳೆ ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶ ಕುರಿತು ಹಿಂಸಾಚಾರದ ವಿಷಯವನ್ನೆತ್ತಲು ಎಡಪಕ್ಷಗಳ ಸದಸ್ಯರು ಮುಂದಾದರೆ ಕಾಂಗ್ರೆಸ್ ಸದಸ್ಯರು ರಫೇಲ್ ವಿವಾದ ಕುರಿತು ಪ್ರತಿಭಟನೆಯಲ್ಲಿ ತೊಡಗಿದ್ದರು.
ತಮ್ಮ ಆಸನಗಳಿಗೆ ಮರಳುವಂತೆ ಮತ್ತು ಸದನದ ಕಾರ್ಯ ನಿರ್ವಹಣೆಗೆ ಅವಕಾಶವನ್ನು ನೀಡುವಂತೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಪದೇ ಪದೇ ಮಾಡಿಕೊಂಡ ವಿನಂತಿಗಳು ಫಲ ನೀಡದಿದ್ದಾಗ ಸದನವನ್ನು ಅಪರಾಹ್ನ ಎರಡು ಗಂಟೆಯವರೆಗೆ ಮುಂದೂಡಲಾಯಿತು.
ಸದನವು ಮರುಸಮಾವೇಶಗೊಂಡಾಗಲೂ ಕೋಲಾಹಲ ಮುಂದುವರಿದಿತ್ತು. ಗದ್ದಲದ ನಡುವೆಯೇ ಆಯುಷ್ ಸಚಿವ ಶ್ರೀಪಾದ ನಾಯ್ಕ ಅವರು ಭಾರತೀಯ ವೈದ್ಯ ಪದ್ಧತಿಗಾಗಿ ರಾಷ್ಟ್ರೀಯ ಆಯೋಗ ಮಸೂದೆ 2019 ಮತ್ತು ರಾಷ್ಟ್ರೀಯ ಹೋಮಿಯೊಪಥಿ ಆಯೋಗ ಮಸೂದೆ 2019 ಸೇರಿದಂತೆ ಐದು ಮಸೂದೆಗಳನ್ನು ಸದನದಲ್ಲಿ ಮಂಡಿಸಿದರು.
ಈ ವೇಳೆ ಸದನವನ್ನು ಮತ್ತೆ 15 ನಿಮಿಷಗಳ ಕಾಲ ಮುಂದೂಡಲಾಯಿತು. ಆದರೆ ಸದನವು ಮರುಸಮಾವೇಶಗೊಂಡಾಗಲೂ ಪ್ರತಿಭಟನೆಗಳು ಮುಂದುವರಿದಿದ್ದರಿಂದ ಪೀಠದಲ್ಲಿದ್ದ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್ ಅವರು ಸದನವನ್ನು ದಿನದ ಮಟ್ಟಿಗೆ ಮುಂದೂಡಿದರು.