ಭಾರತದ ಸ್ಮರಣೀಯ ಗೆಲುವಿನ ರೂವಾರಿಗಳು

ಸಿಡ್ನಿ, ಜ.7: ವಿದೇಶಿ ವಾತಾವರಣದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಚೇತೇಶ್ವರ ಪೂಜಾರ ಹಾಗೂ ಜಸ್‌ಪ್ರಿತ್ ಬುಮ್ರಾ ಭಾರತ ಇತಿಹಾಸ ನಿರ್ಮಿಸಲು ನೇತೃತ್ವವಹಿಸಿದ ಪ್ರಮುಖ ಸಾರಥಿಗಳಾಗಿದ್ದಾರೆ.
ಈ ಇಬ್ಬರು ಆಟಗಾರರು ನಾಯಕ ವಿರಾಟ್ ಕೊಹ್ಲಿಯ ನೆರಳಿನಿಂದ ಹೊರಬಂದು ತಂಡದ ಗೆಲುವಿಗೆ ಕಾಣಿಕೆ ನೀಡಿದ್ದು ವಿಶೇಷವಾಗಿತ್ತು. ಕೊಹ್ಲಿ ಯಾವಾಗಲೂ ತಂಡ ಸಂಕಷ್ಟದಲ್ಲಿದ್ದಾಗ ಹೆಗಲು ನೀಡುತ್ತಾರೆ. ಉಪಖಂಡದ ಹೊರಗೆ ಈವರೆಗೆ ಉತ್ತಮ ಪ್ರದರ್ಶನ ನೀಡದ ಸೌರಾಷ್ಟ್ರ ದಾಂಡಿಗ ಪೂಜಾರ ಸರಣಿಯ 4 ಟೆಸ್ಟ್ ಪಂದ್ಯಗಳಲ್ಲಿ 74.42ರ ಸರಾಸರಿಯಲ್ಲಿ ಒಟ್ಟು 521 ರನ್ ಗಳಿಸಿದ್ದು, 193 ರನ್ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಪೂಜಾರ ಅಡಿಲೇಡ್, ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ಶತಕ ಸಿಡಿಸಿದ್ದಾರೆ. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗಳೆರಡನ್ನೂ ಬಾಚಿಕೊಂಡಿದ್ದಾರೆ. ವೇಗಿಗಳಾದ ಬುಮ್ರಾ(21 ವಿಕೆಟ್) ಹಾಗೂ ಮುಹಮ್ಮದ್ ಶಮಿ (16 ವಿಕೆಟ್)ಸಾಧಾರಣ ಮಟ್ಟದ ಆಸ್ಟ್ರೇಲಿಯದ ಬ್ಯಾಟಿಂಗ್ ಸರದಿಗೆ ಸವಾಲಾಗಿ ಪರಿಣಮಿಸಿದರು. ಸರಣಿಯಲ್ಲಿ ಭಾರತದ ದಾಂಡಿಗರು ಸಿಡಿಸಿದ ಐದು ಶತಕಗಳ ಪೈಕಿ ನಾಯಕ ಕೊಹ್ಲಿ ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ಗಳಿಸಿದ ಶತಕ ಐಸಿಸಿಯಿಂದ ಶ್ಲಾಘನೆಗೆ ಒಳಗಾಗಿದೆ. ಸಿಡ್ನಿ ಟೆಸ್ಟ್‌ನಲ್ಲಿ 159 ರನ್ ಗಳಿಸಿರುವ ರಿಷಭ್ ಪಂತ್ ಒಟ್ಟು 350 ರನ್ ಗಳಿಸಿ ಸರಣಿಯಲ್ಲಿ ಎರಡನೇ ಗರಿಷ್ಠ ಸ್ಕೋರರ್ ಎನಿಸಿದ್ದಾರೆ.

ಕರ್ನಾಟಕದ ಯುವ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್(195 ರನ್)ತಾನಾಡಿದ ಚೊಚ್ಚಲ ಸರಣಿಯಲ್ಲಿ ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಸ್ಲಿಗಿಂಗ್ ಶೈಲಿಯ ಬೌಲಿಂಗ್‌ನಲ್ಲಿ ದಾಂಡಿಗರ ನಿದ್ದೆಗೆಡಿಸಿರುವ ಬುಮ್ರಾ ಆಸ್ಟ್ರೇಲಿಯ ಆಟಗಾರರನ್ನು ಅವರದೇ ನೆಲದಲ್ಲಿ ಕಟ್ಟಿಹಾಕಲು ಯಶಸ್ವಿಯಾಗಿದ್ದಾರೆ. ಇಶಾಂತ್ ಶರ್ಮಾ(11) ಹಾಗೂ ಶಮಿ ಕೂಡ ಬುಮ್ರಾಗೆ ಸಾಥ್ ನೀಡಿದ್ದಾರೆ. ಸರಣಿಯಲ್ಲಿ ಆಸ್ಟ್ರೇಲಿಯ ಕಳೆದುಕೊಂಡ 70 ವಿಕೆಟ್‌ಗಳ ಪೈಕಿ 50 ವಿಕೆಟ್‌ಗಳು ಭಾರತದ ವೇಗಿಗಳ ಪಾಲಾಗಿವೆ.

ಸರಣಿಯ ಕೊನೆಯ 2 ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ 7 ವಿಕೆಟ್ ಕಬಳಿಸಿದ್ದಾರೆ. ಅರ್ಧಶತಕ ಗಳಿಸಿ ಆಲ್‌ರೌಂಡ್ ಸಾಮರ್ಥ್ಯ ತೋರಿದ್ದಾರೆ.
ಇನ್ನೋರ್ವ ಸ್ಪಿನ್ನರ್ ಕುಲ್‌ದೀಪ್ ಯಾದವ್ ಸರಣಿಯಲ್ಲಿ ತನಗೆ ಲಭಿಸಿದ ಮೊದಲ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದು, ಸಿಡ್ನಿ ಟೆಸ್ಟ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದರು. ಮಾಯಾಂಕ್ ಹಾಗೂ ಕುಲ್‌ದೀಪ್ ಟೆಸ್ಟ್ ಕ್ರಿಕೆಟ್‌ನ ಹೊಸ ಅಸ್ತ್ರವಾಗಿ ಹೊರಹೊಮ್ಮಿದ್ದಾರೆ. ತಮಿಳುನಾಡಿನ ಮುರಳಿ ವಿಜಯ್ ಹಾಗೂ ಆರ್.ಅಶ್ವಿನ್ ಸ್ಥಾನಕ್ಕೆ ಕುತ್ತು ತಂದಿದ್ದಾರೆ.

ರಾಹುಲ್, ವಿಜಯ್ ನಿರಾಸೆ:
ಸರಣಿಯಲ್ಲಿ ಆರಂಭಿಕ ಜೋಡಿಯಾಗಿದ್ದ ಕೆಎಲ್ ರಾಹುಲ್ ಹಾಗೂ ವಿಜಯ್ ಭಾರೀ ನಿರಾಸೆಗೊಳಿಸಿದರು. ವಿಜಯ್ 4 ಇನಿಂಗ್ಸ್‌ಗಳಲ್ಲಿ ಕೇವಲ 49 ರನ್ ಗಳಿಸಿದ್ದಾರೆ. ರಾಹುಲ್ 5 ಇನಿಂಗ್ಸ್ ಗಳಲ್ಲಿ 57 ರನ್ ಗಳಿಸಲಷ್ಟೇ ಶಕ್ತರಾದರು. ಉಪ ನಾಯಕ ಅಜಿಂಕ್ಯ ರಹಾನೆ 4 ಪಂದ್ಯಗಳಲ್ಲಿ 217 ರನ್ ಗಳಿಸಿ ಸಾಧಾರಣ ಪ್ರದರ್ಶನ ನೀಡಿದರು.







