ರಣಜಿ ಕ್ರಿಕೆಟ್: ಸಂಕಷ್ಟದಲ್ಲಿ ಕರ್ನಾಟಕ
ರಣಜಿ ಟ್ರೋಫಿ

►ಬರೋಡಾಗೆ ಪ್ರ.ಇನಿಂಗ್ಸ್ ಮುನ್ನಡೆ
►ಮೊದಲ ದಿನ 22 ವಿಕೆಟ್ ಪತನ
ವಡೋದರಾ, ಜ.7: ಕ್ವಾರ್ಟರ್‌ಫೈನಲ್ ಪ್ರವೇಶ ನಿರ್ಣಯಿಸುವ ಪ್ರಮುಖ ಪಂದ್ಯದಲ್ಲಿ ಕರ್ನಾಟಕ ಹಿನ್ನಡೆ ಅನುಭವಿಸಿದೆ. ಬರೋಡಾ ವಿರುದ್ಧ ಸೋಮವಾರ ಆರಂಭಗೊಂಡ ರಣಜಿ ಟೂರ್ನಿಯ ‘ಎ’ ಗುಂಪಿನ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಕರ್ನಾಟಕ 112 ರನ್ ಗಳಿಸಿ ಸರ್ವಪತನ ಕಂಡಿದೆ. ಬರೋಡಾ 223 ರನ್ ಗಳಿಸಿ ಆಲೌಟ್ ಆಗಿದೆ. ತನ್ನ ಎರಡನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ 13 ರನ್‌ಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಇಲ್ಲಿಯ ಮೋತಿಬಾಗ್ ಕ್ರೀಡಾಂಗಣದಲ್ಲಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ಪ್ರಥಮ ಇನಿಂಗ್ಸ್‌ನ ಆರಂಭದಲ್ಲೇ ಆಘಾತಕ್ಕ್ಕೆ ಒಳಗಾಯಿತು. ಆರ್.ಸಮರ್ಥ್(8), ನಿಶ್ಚಲ್(0), ಕೆ.ಸಿದ್ಧಾರ್ಥ್(4) ಹಾಗೂ ಕರುಣ್ ನಾಯರ್(12) ತಂಡದ ಖಾತೆಗೆ 31 ರನ್ ಸೇರುವಷ್ಟರಲ್ಲಿ ಪೆವಿಲಿಯನ್ ಸೇರಿದ್ದರು. ಈ ಹಂತದಲ್ಲಿ ನಾಯಕ ಮನೀಷ್ ಪಾಂಡೆ(43) ತಂಡವನ್ನು ಆಧರಿಸುವ ಪ್ರಯತ್ನ ಮಾಡಿದರು. ವಿಕೆಟ್ ಕೀಪರ್ ದಾಂಡಿಗ ಶರತ್(30) ನಾಯಕನಿಗೆ ಅಲ್ಪ ಸಾಥ್ ನೀಡಿದರು. ಇವರಿಬ್ಬರನ್ನು ಹೊರತುಪಡಿಸಿ ತಂಡದ ಇತರ ಆಟಗಾರರು ಸಂಪೂರ್ಣ ವಿಫಲರಾದರು. ತಂಡದ ನಾಲ್ವರು ಆಟಗಾರರು ಸೊನ್ನೆ ಸುತ್ತಿದ್ದು ತಂಡಕ್ಕೆ ದುಬಾರಿಯಾಯಿತು. ಅಂತಿಮವಾಗಿ ಪ್ರವಾಸಿಗರು 112 ರನ್‌ಗೆ ಗಂಟುಮೂಟೆ ಕಟ್ಟಿದರು.
ಬರೋಡಾ ಪರ ಲುಕ್ಮಾನ್ ಮೆರಿವಾಲಾ ಹಾಗೂ ಭಾರ್ಗವ್ ಭಟ್ ತಲಾ 3 ವಿಕೆಟ್ ಪಡೆದು ಯಶಸ್ವಿ ಬೌಲರ್‌ಗಳೆನಿಸಿದರು.
ಕರ್ನಾಟಕದ ಅಲ್ಪ ಮೊತ್ತಕ್ಕೆ ಪ್ರತಿಯಾಗಿ ತನ್ನ ಪ್ರಥಮ ಇನಿಂಗ್ಸ್ ಆರಂಭಿಸಿದ ಬರೋಡಾಗೆ ವಿಷ್ಣು ಸೋಲಂಕಿ(69), ದೀಪಕ್ ಹೂಡಾ(51) ಹಾಗೂ ಯೂಸುಫ್ ಪಠಾಣ್(ಅಜೇಯ 36) ಉತ್ತಮ ಮೊತ್ತ ಜಮೆ ಮಾಡಲು ನೆರವಾದರು. ಬರೋಡಾ ಅಂತಿಮವಾಗಿ 223 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.ಕರ್ನಾಟಕದ ಪರ ಶುಭಾಂಗ್ ಹೆಗ್ಡೆ ಹಾಗೂ ಶ್ರೇಯಸ್ ಗೋಪಾಲ್ ತಲಾ 4 ವಿಕೆಟ್ ಪಡೆದರು.
ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ 13 ರನ್ ಗೆ 2 ವಿಕೆಟ್ ಕಳೆದುಕೊಂಡಿದೆ. ಕೆ.ಸಿದ್ಧಾರ್ಥ್(11) ಹಾಗೂ ಕರುಣ್ ನಾಯರ್(2) ಕ್ರೀಸ್ ಕಾಯ್ದುಕೊಂಡಿದ್ದಾರೆ.







