ಎಂಟು ದೇಶಗಳ ಆಟಗಾರರ ಸಂಗಮ ಫೆಲೆಸ್ತೀನ್ ತಂಡ !
ಏಶ್ಯಕಪ್ ಫುಟ್ಬಾಲ್

ಅಬುಧಾಬಿ, ಜ.7: ಈ ಋತುವಿನ ಏಶ್ಯಕಪ್ ಫುಟ್ಬಾಲ್‌ನಲ್ಲಿ ಫೆಲೆಸ್ತೀನ್ ತಂಡ ಪಾಲ್ಗೊಳ್ಳುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. 63 ವರ್ಷಗಳ ಇತಿಹಾಸದಲ್ಲಿ ಫೆಲೆಸ್ತೀನ್ ಎರಡನೇ ಬಾರಿ ಟೂರ್ನಿಗೆ ಅರ್ಹತೆ ಪಡೆದಿದೆ. ವಿಶೇಷವೆಂದರೆ ಈ ತಂಡದಲ್ಲಿರುವ 7 ಮಂದಿ ಆಟಗಾರರು ವಿದೇಶಿಗರು. ದೇಶದ ಒಟ್ಟು 8 ಆಟಗಾರರು ಈ ತಂಡದಲ್ಲಿದ್ದಾರೆ.
23 ಸದಸ್ಯರ ತಂಡದಲ್ಲಿ ಫೆಲೆಸ್ತೀನ್‌ನ್ನು ಹೊರತುಪಡಿಸಿ ಇಸ್ರೇಲ್, ಅರ್ಜೆಂಟೀನ, ಚಿಲಿ, ಸ್ಲೋವಾನಿಯ, ಅಮೆರಿಕ, ಸ್ವೀಡನ್ ಹಾಗೂ ತಝಿಕಿಸ್ತಾನ ಮೂಲದ ಆಟಗಾರ ರ ಸಂಗಮವಾಗಿದೆ ತಂಡ. ಇದರಲ್ಲಿ ಫೆಲೆಸ್ತೀನ್‌ನ 9, ಇಸ್ರೇಲ್‌ನ 5, ಚಿಲಿಯ 4, ಸ್ಲೋವಾನಿಯ, ಅರ್ಜೆಂಟೀನ, ಅಮೆರಿಕ, ಸ್ವೀಡನ್ ಹಾಗೂ ತಝಿಕಿಸ್ತಾನದ ತಲಾ ಒಬ್ಬರು ಆಟಗಾರರಿದ್ದಾರೆ. ಈ ಆಟಗಾರರ ನೆರವಿನಿಂದ ತಂಡ ಎಎಫ್‌ಸಿ ಚಾಲೆಂಜ್ ಕಪ್ ಜಯಿಸಿ ಮಹತ್ವದ ಸಾಧನೆ ಮಾಡಿತ್ತು. ಅಲ್ಲದೆ ಫಿಫಾ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 73ನೇ ಸ್ಥಾನದಲ್ಲಿಯೂ ರಾರಾಜಿಸಿತ್ತು.
ಕೆಲವು ಆಟಗಾರರಿಗೆ ಅನ್ಯ ದೇಶಗಳನ್ನು ಪ್ರತಿನಿಧಿಸಿ ಬಂದ ನಂತರ ರಾಷ್ಟ್ರೀಯ ತಂಡದಲ್ಲಿ ಸ್ಥಾನ ದೊರೆತಿದೆ.





