ಇನಿಂಗ್ಸ್‌ನ ಹತ್ತೂ ವಿಕೆಟ್ ಉರುಳಿಸಿದ ಲಂಕಾದ ಪುಷ್ಪಕುಮಾರ್ ಮಲಿಂದ

ಕೊಲಂಬೊ, ಜ.7: ಶ್ರೀಲಂಕಾ ಪ್ರಥಮದರ್ಜೆ ಕ್ರಿಕೆಟ್ ಪಂದ್ಯವೊಂದರಲ್ಲಿ ಇನಿಂಗ್ಸ್‌ವೊಂದರ ಎಲ್ಲ 10 ವಿಕೆಟ್‌ಗಳನ್ನು ಪಡೆದ ಸ್ಪಿನ್ನರ್ ಮಲಿಂದ ಪುಷ್ಪಕುಮಾರ್ ಮುಖಪುಟ ಸುದ್ದಿಯಾಗಿದ್ದಾರೆ.
ಸೋಮವಾರ ಕೊಲಂಬೊ ಕ್ರಿಕೆಟ್ ಕ್ಲಬ್ ತಂಡದ ಪರ ಕಣಕ್ಕಿಳಿದಿದ್ದ ಪುಷ್ಪಕುಮಾರ್, ಸಾರಾಸೆನ್ಸ್ ಸ್ಪೋರ್ಟ್ಸ್ ಕ್ಲಬ್ ವಿರುದ್ಧದ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ 37 ರನ್ ವ್ಯಯಿಸಿ 10 ವಿಕೆಟ್ ಪಡೆದು ಗಮನಸೆಳೆದಿದ್ದಾರೆ. 349 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಸಾರಾಸೆನ್ಸ್ ತಂಡ ಕೇವಲ 113 ರನ್‌ಗೆ ಸರ್ವಪತನ ಕಂಡಿತು. ಪ್ರಥಮ ಇನಿಂಗ್ಸ್‌ನಲ್ಲಿ ಪಡೆದ 6 ವಿಕೆಟ್ ಸೇರಿದಂತೆ ಪುಷ್ಪಕುಮಾರ್ ಪಂದ್ಯದಲ್ಲಿ ಒಟ್ಟು 110 ರನ್ ನೀಡಿ 16 ವಿಕೆಟ್ ಕೆಡವಿದರು.
ಅವರ ಈ ಸಾಧನೆ ಪ್ರಥಮ ದರ್ಜೆ ಕ್ರಿಕೆಟ್‌ನ ಶ್ರೇಷ್ಠ ಬೌಲಿಂಗ್ ವಿಭಾಗದಲ್ಲಿ ಜಂಟಿ 13ನೇ ಸ್ಥಾನದಲ್ಲಿದೆ. 1932ರಲ್ಲಿ ಯಾರ್ಕ್‌ಶೈರ್ ಪರ ನಾಟಿಂಗ್‌ಹ್ಯಾಮ್‌ಶೈರ್ ತಂಡದ ವಿರುದ್ಧ ಆಡಿದ್ದ ಹೆಡ್ಲಿ ವೆರಿಟಿಯ 10 ರನ್ ನೀಡಿ 10 ವಿಕೆಟ್ ಸಾಧನೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇದೇ ವೇಳೆ ಪುಷ್ಪಕುಮಾರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳ ಗಡಿ ದಾಟಿದ ಸಾಧನೆಗೆ ಪಾತ್ರರಾದರು.ಅವರು ಶ್ರೀಲಂಕಾ ರಾಷ್ಟ್ರೀಯ ತಂಡದ ಪರ 4 ಟೆಸ್ಟ್‌ಗಳಲ್ಲಿ ಆಡಿದ್ದಾರೆ.







