‘ದಾಖಲೆ ಬಗ್ಗೆ ಯೋಚಿಸಲಾರೆ’

ಅಬುಧಾಬಿ, ಜ.7: ‘‘ದಾಖಲೆಗಳು, ಯಾರು ಗೋಲು ಬಾರಿಸಿದರು ಎನ್ನುವುದು ವಿಷಯವಲ್ಲ. ಯಾರೇ ಗೋಲು ಬಾರಿಸಿದರೂ ಸಂಭ್ರಮ ಒಂದೇಯಾಗಿರುತ್ತದೆ. ಎಎಫ್‌ಸಿ ಏಶ್ಯಕಪ್‌ನಲ್ಲಿ ನನ್ನ ತಂಡಕ್ಕೆ ಮೂರು ಅಂಕ ಗಳಿಸಲು ನೆರವಾಗಿದ್ದಕ್ಕೆ ಸಂತೋಷವಿದೆ’’ ಎಂದು ಭಾರತದ ಹಿರಿಯ ಆಟಗಾರ ಸುನೀಲ್ ಚೆಟ್ರಿ ಹೇಳಿದ್ದಾರೆ.
ರವಿವಾರ ನಡೆದ ಥಾಯ್ಲೆಂಡ್ ವಿರುದ್ಧ 4-1 ಅಂತರದಿಂದ ಜಯ ಸಾಧಿಸಿದ್ದ ಭಾರತದ ಪರ ಅವಳಿ ಗೋಲು ಗಳಿಸಿದ್ದ ಚೆಟ್ರಿ 1964ರ ಬಳಿಕ ಏಶ್ಯಕಪ್‌ನಲ್ಲಿ ಭಾರತಕ್ಕೆ ಮೊದಲ ಜಯ ತಂದಿದ್ದರು. ಮಾತ್ರವಲ್ಲ ವೃತ್ತಿಜೀವನದ 67ನೇ ಗೋಲು ಗಳಿಸಿ ಸಕ್ರಿಯ ಅಂತರ್‌ರಾಷ್ಟ್ರೀಯ ಫುಟ್ಬಾಲ್ ಆಟಗಾರರ ಪೈಕಿ 2ನೇ ಗರಿಷ್ಠ ಗೋಲ್‌ಸ್ಕೋರರ್ ಎನಿಸಿಕೊಂಡು ಅರ್ಜೆಂಟೀನದ ಸೂಪರ್‌ಸ್ಟಾರ್ ಲಿಯೊನೆಲ್ ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿದರು. ‘‘ನಾನು ನನ್ನ ಗೋಲಿನ ಬಗ್ಗೆ 10 ವರ್ಷಗಳ ಬಳಿಕ ಯೋಚಿಸುವೆ. ಈ ಕ್ಷಣದಲ್ಲಿ ಪಂದ್ಯದ ಮೇಲೆ ಗಮನ ನೀಡುವುದು ಮುಖ್ಯ. ಗೋಲುಗಳು ಬರಬೇಕು. ಯಾರು ಗಳಿಸಿದರು ಎನ್ನುವುದು ವಿಷಯವಲ್ಲ’’ ಎಂದರು.
ಮೆಸ್ಸಿ ಹಾಗೂ ರೊನಾಲ್ಡೊರ ನಡುವಿನ ಅಂಕಿ-ಅಂಶ ಹಾಗೂ ಗೋಲು ಗಳಿಕೆಯೊಂದಿಗೆ ತನ್ನ ಸಾಧನೆಯನ್ನು ಹೋಲಿಕೆ ಮಾಡುವ ಕುರಿತು ಪ್ರತಿಕ್ರಿಯಿಸಿದ ಚೆಟ್ರಿ,‘‘ಇದು ನ್ಯಾಯೋಚಿತವಲ್ಲ. ಮೆಸ್ಸಿ, ರೊನಾಲ್ಡೊ ಇಬ್ಬರೂ ವಿಶ್ವ ದರ್ಜೆಯ ಸ್ಟಾರ್‌ಗಳು. ನಾನು ಮೆಸ್ಸಿ ಹಾಗೂ ರೊನಾಲ್ಡೊರ ದೊಡ್ಡ ಅಭಿಮಾನಿ. ಅವರಿಬ್ಬರಿಗೆ ಹಾಗೂ ನನಗೆ ತುಂಬಾ ವ್ಯತ್ಯಾಸವಿದೆ. ಅವರಿಬ್ಬರೊಂದಿಗೆ ಹೋಲಿಕೆ ಸರಿಯಲ್ಲ’’ ಎಂದಿದ್ದರು.





