ಥಾಯ್ಲೆಂಡ್ ಫುಟ್ಬಾಲ್ ಕೋಚ್ ತಲೆದಂಡ
ಅಬುಧಾಬಿ, ಜ.7: ಭಾರತ ತಂಡದ ವಿರುದ್ಧ ರವಿವಾರ ನಡೆದ ಏಶ್ಯಕಪ್ ಪಂದ್ಯದಲ್ಲಿ ಥಾಯ್ಲೆಂಡ್ 1-4 ಗೋಲುಗಳ ಹೀನಾಯ ಸೋಲು ಅನುಭವಿಸಿದ ಕಾರಣ ಆ ತಂಡದ ಕೋಚ್ ಮಿಲೊವನ್ ರಾಜೆವಾಕ್‌ರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ.
65 ವರ್ಷದ ರಾಜೆವಾಕ್ 2017ರಲ್ಲಿ ಥಾಯ್ಲೆಂಡ್ ತಂಡದ ಕೋಚ್ ಹುದ್ದೆ ವಹಿಸಿಕೊಂಡಿದ್ದರು. ಥಾಯ್ಲೆಂಡ್ ಅಬುಧಾಬಿಯಲ್ಲಿ ನಡೆದ ಪಂದ್ಯದ ದ್ವಿತೀಯಾರ್ಧ ಅವಧಿಯಲ್ಲಿ ಭಾರತ ತಂಡಕ್ಕೆ ಮೂರು ಗೋಲುಗಳನ್ನು ಬಿಟ್ಟುಕೊಟ್ಟು ಹೀನಾಯ ಸೋಲು ಅನುಭವಿಸಿದ್ದಕ್ಕೆ ಬೆಲೆ ತೆರಬೇಕಾಯಿತು.
‘‘ನಾವು ನಿರೀಕ್ಷಿಸಿದಂತೆ ಫಲಿತಾಂಶ ಬಂದಿಲ್ಲ, ದೇಶದ ಎಲ್ಲ ಫುಟ್ಬಾಲ್ ಅಭಿಮಾನಿಗಳ ರೀತಿಯಲ್ಲಿ ನನಗೂ ನಿರಾಶೆಯಾಗಿದೆ. ಆದರೆ ಅಧ್ಯಕ್ಷನಾಗಿ ನಾನು ಸಮಸ್ಯೆಯನ್ನು ಕಂಡೂ ಸುಮ್ಮನಿರುವಂತಿಲ್ಲ’’ ಎಂದು ಥಾಯ್ಲೆಂಡ್ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಸೊಮ್ಯಾಟ್ ಪೂಂಪನ್‌ವೌಂಗ್ ಹೇಳಿದ್ದಾರೆ.
ಥಾಯ್ಲೆಂಡ್ ತಂಡ ಬಹರೈನ್ ಹಾಗೂ ಆತಿಥೇಯ ಯುಎಇ ವಿರುದ್ಧ ಪಂದ್ಯಗಳನ್ನು ಆಡಲಿದ್ದು, ತಂಡದ ಮಾಜಿ ಸಹಾಯಕ ಕೋಚ್ ಸಿರಿಸಾಕ್ ಯೊದ್ಯಾರ್ಡ್ ಥಾಯ್ ತಂಡದ ತಾತ್ಕಾಲಿಕ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.





