ಹನೂರು: ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರಿಂದ ಶಿಲಾನ್ಯಾಸ

ಹನೂರು,ಜ.7: ತಾಲೂಕಿನ ವಿವಿಧೆಡೆಯಲ್ಲಿ ಶಾಸಕ ನರೇಂದ್ರರಾಜುಗೌಡ ಹಲವು ಅಭಿವೃದ್ದಿ ಕಾಮಗಾರಿಗಳಿಗೆ ಸೋಮವಾರದಂದು ಶಿಲಾನ್ಯಾಸ ನೆರವೇರಿಸಿದರು.
ಪಟ್ಟಣ ಸಮೀಪದ ಆರ್.ಎಸ್ ದೊಡ್ಡಿಯ ಬಳಿ ಹಲವು ವರ್ಷಗಳ ಹಿಂದೆ ಬಾಡಿಗೆ ಕಟ್ಟಡದಲ್ಲಿ ಸರ್ಕಾರಿ ಐಟಿಐ ಕಾಲೇಜು ತೆರೆಯಲಾಗಿತ್ತು. ಆದರೆ ಇಲ್ಲಿ ಸಮರ್ಪಕ ಮೂಲ ಸೌಕರ್ಯವಿಲ್ಲದ ಪರಿಣಾಮ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಪರಿಣಾಮ ಈ ಬಗ್ಗೆ ನಮ್ಮ ಗಮನಕ್ಕೆ ಬಂದಿತ್ತು. ಈ ದಿಸೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದ್ದು, 2 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ದೊರಕಿತ್ತು. ಇದೀಗ ಅನುದಾನ ಬಿಡುಗಡೆಯಾಗಿದ್ದು, ಹನೂರು ಪಟ್ಟಣದ ಸಮೀಪದ ಹುಲುಸುಗುಡ್ಡೆಯ ಬಳಿ 1 ಎಕರೆ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಕಾಮಗಾರಿಯ ಜವಾಬ್ದಾರಿ ಹೊತ್ತವರು ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಮೂಲಕ ಆದಷ್ಟು ಬೇಗ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಹಾಗೆಯೇ ಗುಣಮಟ್ಟದಿಂದ ಕೂಡಿರಬೇಕು ಎಂದು ತಿಳಿಸಿದರು.
ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ: ಬಳಿಕ ಅಜ್ಜೀಪುರದಲ್ಲಿ ಎಸ್‍ಇಪಿ ಯೋಜನೆಯಡಿ 47 ಲಕ್ಷ ರೂ ವೆಚ್ಚದಲ್ಲಿ ಶಾಸಕ ಆರ್. ನರೇಂದ್ರ ಅವರು ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ, ತಾಪಂ ಅಧ್ಯಕ್ಷ ಆರ್. ರಾಜೇಂದ್ರ, ತಾಪಂ ಸದಸ್ಯ ನಟರಾಜು ಪಪಂ ಉಪಾಧ್ಯಕ್ಷ ಬಸವರಾಜು, ನಿರ್ಮಿತಿ ಕೇಂದ್ರದ ಅಧಿಕಾರಿಗಳಾದ ರವಿಕುಮಾರ್, ಮಹದೇವಶೆಟ್ರು ಎಇಇ ಮಾದೇವ್, ಪ್ರಾಂಶುಪಾಲ ಗಿರೀಶ್, ಮುಖಂಡರಾದ ಚಿಕ್ಕತಮ್ಮಯ್ಯ, ವೆಂಕಟರಮಣನಾಯ್ಡು, ಸುದೇಶ್, ಮುರುಡೇಶ್ವರಸ್ವಾಮಿ ಹಾಗೂ ಇನ್ನಿತರರು ಇದ್ದರು.







