ಲೋಕಸಭಾ ಚುನಾವಣೆ: ಸ್ಪರ್ಧೆಯಿಂದ ಹಿಂದೆ ಸರಿದ ಪ್ರಿಯಾ ದತ್

ಮುಂಬೈ,ಜ.7: ಕಾಂಗ್ರೆಸ್‌ನ ಮಾಜಿ ಸಂಸದೆ ಪ್ರಿಯಾ ದತ್ ವೈಯಕ್ತಿಕ ಕಾರಣದಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಳಿ ತನ್ನ ನಿರ್ಧಾರದ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ತಂದೆ ಸುನೀಲ್ ದತ್ ನಿಧನದ ಬಳಿಕ ಮುಂಬೈ ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಪ್ರಿಯಾ 2005ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಜಯಶಾಲಿಯಾಗಿದ್ದರು. 2009ರಲ್ಲಿ ಇದೇ ಕ್ಷೇತ್ರದಿಂದ ಮತ್ತೊಮ್ಮೆ ಚುನಾಯಿತರಾಗಿದ್ದರು. 2014ರ ಚುನಾವಣೆಯಲ್ಲಿ ಬಿಜೆಪಿಯ ಪೂನಂ ಮಹಾಜನ್ ವಿರುದ್ಧ ಪ್ರಿಯಾ ಭಾರೀ ಮತಗಳ ಅಂತರದಿಂದ ಸೋತಿದ್ದರು. 2014ರಲ್ಲಿ ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ ಮುಂಬೈನಲ್ಲಿ ಎಲ್ಲ ಸೀಟುಗಳಲ್ಲಿ ಸೋತಿತ್ತು. 44 ಲೋಕಸಭಾ ಕ್ಷೇತ್ರಗಳಿರುವ ಮಹಾರಾಷ್ಟ್ರದಲ್ಲಿ ಕಳಪೆ ಪ್ರದರ್ಶನ ನೀಡಿತ್ತು.
"ಪಕ್ಷದ ಕೆಲವು ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯವಿತ್ತು. ನಾನು ಪಕ್ಷಕ್ಕಾಗಿ, ಕಾರ್ಯಕರ್ತರು ಹಾಗೂ ಕ್ಷೇತ್ರಕ್ಕಾಗಿ ದುಡಿದಿದ್ದೇನೆ. ಇದೀಗ ವೈಯಕ್ತಿಕ ಕಾರಣದಿಂದಾಗಿ,ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ'' ಎಂದು ಸುನೀಲ್ ದತ್‌ರ ಕಿರಿಯ ಪುತ್ರಿ ಪ್ರಿಯಾ ಹೇಳಿದ್ದಾರೆ.





