ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿ:ಬುಮ್ರಾಗೆ ವಿಶ್ರಾಂತಿ

ಸಿಡ್ನಿ, ಜ.8: ಭರ್ಜರಿ ಫಾರ್ಮ್‌ನಲ್ಲಿರುವ ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾರನ್ನು ಮುಂಬರುವ ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ಆಸ್ಟ್ರೇಲಿಯದಲ್ಲಿ ಭಾರತ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನ ಹೀರೋ ಬುಮ್ರಾರಿಂದ ತೆರವಾದ ಸ್ಥಾನಕ್ಕೆ ಹೈದರಾಬಾದ್ ಯುವ ವೇಗಿ ಮುಹಮ್ಮದ್ ಸಿರಾಜ್ ಆಯ್ಕೆಯಾಗಿದ್ದಾರೆ.
ಬುಮ್ರಾ ಆಸೀಸ್ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಟ್ಟು 21 ವಿಕೆಟ್‌ಗಳನ್ನು ಪಡೆದು ಆಸ್ಟ್ರೇಲಿಯದ ಸ್ಪಿನ್ನರ್ ನಥಾನ್ ಲಿಯೊನ್‌ರೊಂದಿಗೆ ಸರಣಿಯ ಜಂಟಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
‘‘ಬೌಲರ್‌ನ ಕೆಲಸದ ಭಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ವದೇಶದಲ್ಲಿ ನಡೆಯುವ ಆಸ್ಟ್ರೇಲಿಯ ವಿರುದ್ಧ ಸರಣಿಯ ಹಿನ್ನೆಲೆಯಲ್ಲಿ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಮುಹಮ್ಮದ್ ಸಿರಾಜ್ ಅವರು ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್ ಪ್ರವಾಸ ಸರಣಿಗೆ ಆಯ್ಕೆಯಾಗಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ 3 ಪಂದ್ಯಗಳ ಟ್ವೆಂಟಿ-20 ಸರಣಿಗೆ ಪಂಜಾಬ್ ವೇಗಿ ಸಿದ್ದಾರ್ಥ್ ಕೌಲ್‌ಗೆ ಅವಕಾಶ ನೀಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಕೇವಲ 12 ತಿಂಗಳ ಹಿಂದೆ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿರುವ ಬುಮ್ರಾ ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ.
ಭಾರತ ಶನಿವಾರದಿಂದ ಆಸೀಸ್ ವಿರುದ್ಧ ಏಕದಿನ ಸರಣಿ ಆಡಲಿದೆ. ಆ ನಂತರ 5 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ-20 ಸರಣಿಯನ್ನಾಡಲು ನ್ಯೂಝಿಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಕಿವೀಸ್ ವಿರುದ್ಧ ಸರಣಿಯು ಜ.23ಕ್ಕೆ ಆರಂಭವಾಗಲಿದೆ.







