ಜ. 27: ‘ಕರ್ನಾಟಕ ಮುಸ್ಲಿಂ ಜಮಾಅತ್’ ಸಂಘಟನೆ ಅಸ್ತಿತ್ವಕ್ಕೆ: ಮೌಲಾನ ಶಾಫಿ ಸಅದಿ

ಬೆಂಗಳೂರು, ಜ.8: ರಾಜ್ಯದ ಮುಸ್ಲಿಮ್ ಸಮುದಾಯ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಸಂಘಟಿತ ರೂಪದಲ್ಲಿ ಕಾರ್ಯನಿರ್ವಹಿಸಲು ‘ಕರ್ನಾಟಕ ಮುಸ್ಲಿಂ ಜಮಾಅತ್’ ಎಂಬ ಹೊಸ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗುತ್ತಿದೆ ಎಂದು ಸಂಘಟನೆಯ ಸಂಚಾಲಕ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜ.27ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಸಂಘಟನೆಯನ್ನು ಘೋಷಿಸಲಿದ್ದಾರೆ ಎಂದರು.
ಸಮುದಾಯದ ಗಣ್ಯರು ಮತ್ತು ವಿವಿಧ ಕ್ಷೇತ್ರದ ಪರಿಣಿತರನ್ನು ಈ ಸಂಘಟನೆಯಲ್ಲಿ ಸೇರಿಸಿಕೊಳ್ಳಲಾಗುವುದು. ಈಗಾಗಲೆ ವಿವಿಧ ಜಿಲ್ಲೆಗಳಲ್ಲಿ ಸಮಾವೇಶಗಳನ್ನು ನಡೆಸಲಾಗಿದೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸಾವಿರಾರು ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಶಾಫಿ ಸಅದಿ ಹೇಳಿದರು.
ದೇಶದ ಮುಸ್ಲಿಮರ ಸ್ಥಿತಿಗತಿಗಳನ್ನು ಅವಲೋಕಿಸಿ ಅಭಿವೃದ್ಧಿಪಡಿಸಲು ಮತ್ತು ವಿವಿಧ ಮತ-ಧರ್ಮಗಳ ಮಧ್ಯೆ ಸಾಮರಸ್ಯ ಹಾಗೂ ಪರಸ್ಪರ ಪ್ರೀತಿ-ವಿಶ್ವಾಸ ಮೂಡಿಸಿ, ದೇಶದ ಅಖಂಡತೆ ಮತ್ತು ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ರಾಜಕೀಯ ರಹಿತವಾಗಿ, ಪ್ರಮುಖ ಧಾರ್ಮಿಕ, ಸಾಮಾಜಿಕ ಮುಖಂಡರ ನೇತೃತ್ವದಲ್ಲಿ ಈಗಾಗಲೆ ‘ಅಖಿಲ ಭಾರತ ಮುಸ್ಲಿಂ ಜಮಾಅತ್’ ರೂಪುಗೊಂಡಿದೆ ಎಂದು ಅವರು ತಿಳಿಸಿದರು.
ರಾಜ್ಯಮಟ್ಟದ ಸಂಘಟನೆಯ ಘೋಷಣೆಯ ನಂತರ, ಜಿಲ್ಲಾ, ತಾಲೂಕು, ವಲಯ ಮಟ್ಟದಲ್ಲಿ ಜಮಾಅತ್‌ನ್ನು ಅಸ್ತಿತ್ವಕ್ಕೆ ತರಲಾಗುವುದು. ಸಮಾವೇಶದಲ್ಲಿ ಧಾರ್ಮಿಕ ವಿದ್ವಾಂಸರು ಹಾಗೂ ಉಳ್ಳಾಲ ಖಾಝಿ ಸೈಯದ್ ಕೂರತ್ ತಂಙಳ್, ಉಡುಪಿ ಸಂಯುಕ್ತ ಖಾಝಿ ಬೇಕಲ್ ಉಸ್ತಾದ್, ಉತ್ತರ ಪ್ರದೇಶದ ಬರೇಲಿ ಶರೀಫ್‌ನ ಹಝ್ರತ್ ಅಲ್ಲಾಮಾ ಮೌಲಾನ ಅಬ್ದುಲ್ ಮನ್ನಾನಿ ಮಿಯಾಂ ರಝಾ ಖಾನ್ ಖಾದ್ರಿ, ಕಿಚೋಚಿ ಶರೀಫ್‌ನ ಮೌಲಾನ ಸೈಯದ್ ನೂರಾನಿ ಮಿಯಾಂ ಅಶ್ರಫಿ, ಮರ್ಹರ ಶರೀಫ್ ಮೌಲಾನ ನಜೀಬ್ ಹೈದರ್ ಮಿಯಾ ಬರಕಾತಿ, ಹೈದರಾಬಾದ್‌ನ ಮೌಲಾನ ಅಹ್ಮದ್ ನಕ್ಷಬಂದಿ, ಸೈಯದ್ ಶಂಶುಲ್ ಹಖ್ ಖಾದ್ರಿ ಅಲ್ ಹುಸೈನಿ ಸೇರಿದಂತೆ ಇನ್ನಿತರ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಶಾಫಿ ಸಅದಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಡಿಸಿಪಿ ಜಿ.ಎ.ಬಾವಾ, ಸ್ವಾಗತ ಸಮಿತಿ ಅಧ್ಯಕ್ಷ ಡಾ. ಎಸ್.ಎಸ್.ಎ.ಖಾದರ್, ನ್ಯಾಯವಾದಿ ಮಹ್ಮೂದ್ ಪಟೇಲ್, ಅನೀಸ್ ಸಿರಾಜ್, ಹಬೀಬ್ ಕೋಯಾ, ಅಬ್ದುಲ್ ಹಮೀದ್ ಮಡಿಕೇರಿ, ಯಾಕೂಬ್ ಯೂಸುಫ್ ಶಿವಮೊಗ್ಗ, ನ್ಯಾಯವಾದಿ ಶಾಹುಲ್ ಹಮೀದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







