ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ರಾಷ್ಟ್ರವ್ಯಾಪಿ ಮುಷ್ಕರ: ರಾಜ್ಯದಲ್ಲಿ ಭಾಗಶಃ ಯಶಸ್ವಿ

ಬೆಂಗಳೂರು, ಜ. 8: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೂತನ ಮೋಟಾರ್ ವಾಹನ ತಿದ್ದುಪಡಿ ಮಸೂದೆ ಹಿಂಪಡೆಯುವುದು ಸೇರಿದಂತೆ ಕಾರ್ಮಿಕ ವಿರೋಧಿ ಕಾನೂನು ಸುಧಾರಣೆಯನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರ ಭಾಗಶಃ ಯಶಸ್ವಿಯಾಗಿದೆ.
ರಾಜಧಾನಿ ಬೆಂಗಳೂರು, ಮೈಸೂರು, ಕಲಬುರ್ಗಿ, ಬೆಳಗಾವಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿ ಸಾರಿಗೆ ವಾಹನಗಳು, ರಿಕ್ಷಾ, ಟ್ಯಾಕ್ಸಿ ಸೇರಿದಂತೆ ಯಾವುದೇ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಹೀಗಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ತೆರಳಬೇಕಿದ್ದ ಸಾರ್ವಜನಿಕ ಪ್ರಯಾಣಿಕರು ಅಕ್ಷರಶಃ ಪರದಾಡಬೇಕಾಯಿತು.
ಸಾರ್ವತ್ರಿಕ ಸಾರಿಗೆ ವಾಹನಗಳು ರಸ್ತೆಗೆ ಇಳಿಯದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಸದಾ ಜನರಿಂದ ಗಿಜಿಗುಡುತ್ತಿದ್ದ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್) ಸೇರಿದಂತೆ ರಾಜ್ಯದ ಎಲ್ಲ ಬಸ್ ನಿಲ್ದಾಣಗಳು ಜನರಿಲ್ಲದೆ ಬಣಗುಡುತ್ತಿದ್ದವು.
ಮುಷ್ಕರಕ್ಕೆ ಖಾಸಗಿ ವಾಹನಗಳ ಚಾಲಕರು ಮತ್ತು ಮಾಲಕರು ಬೆಂಬಲ ಸೂಚಿಸಿದ್ದರಿಂದ ಖಾಸಗಿ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಆದರೆ, ಕೆಲ ಆಟೋರಿಕ್ಷಾ ಸಂಘಟನೆಗಳು ಬೆಂಬಲ ನೀಡದೆ, ಎಂದಿನಂತೆ ಸಂಚಾರ ಮಾಡಿದ್ದು, ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದುದು ಕಂಡುಬಂತು.
ಪ್ರತಿಭಟನೆ: ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಕರೆ ನೀಡಿದ್ದ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸ್ವಯಂಪ್ರೇರಿತ ಬಂದ್: ರಾಷ್ಟ್ರವ್ಯಾಪಿ ಮುಷ್ಕರದ ಅಂಗವಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಂಗಡಿ-ಮುಂಗಟ್ಟುಗಳು, ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಮುಷ್ಕರಕ್ಕೆ ಬೆಂಬಲ ನೀಡಿದರು. ಅಲ್ಲಲ್ಲಿ ಕೆಲ ಅಂಗಡಿಗಳು ವಹಿವಾಟು ನಡೆಸುತ್ತಿದುದು ಕಂಡುಬಂತು.
ಮುಷ್ಕರದ ಹಿನ್ನೆಲೆಯಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಅಲ್ಲದೆ, ಪಿಯುಸಿ ವಿದ್ಯಾರ್ಥಿಗಳಿಗೆ ನಡೆಯಬೇಕಿದ್ದ ಪೂರ್ವಸಿದ್ಧತಾ ಪರೀಕ್ಷೆಯನ್ನು ಪದವಿ ಪೂರ್ವ ಶಿಕ್ಷಣಾ ಇಲಾಖೆ ಮುಂದೂಡಿತ್ತು. ವಿವಿಧ ವಿಶ್ವ ವಿದ್ಯಾಲಯಗಳು ತಮ್ಮ ಪರೀಕ್ಷೆಗಳನ್ನು ಮುಂದೂಡಿದ್ದವು.
ಶಕ್ತಿಕೇಂದ್ರ ಖಾಲಿ: ಮುಷ್ಕರ ಪ್ರಯುಕ್ತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ(ಎಂ.ಎಸ್.ಬಿಲ್ಡಿಂಗ್) ಸೇರಿದಂತೆ ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಾಗಿರಲಿಲ್ಲ. ಹೀಗಾಗಿ ಶಕ್ತಿಕೇಂದ್ರ ಸಂಪೂರ್ಣ ಖಾಲಿ ಖಾಲಿಯಾಗಿತ್ತು.
ಕಾರ್ಮಿಕ ಸಂಘಟನೆಗಳ ಮುಷ್ಕರ-ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳು ಮತ್ತು ಪ್ರಮುಖ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
‘ಫ್ಯಾಶಿಸಂನ ಶ್ರಾದ್ಧ’ ದಿನ ಸಮೀಪಿಸುತ್ತಿದೆ
ಎಡಪಕ್ಷಗಳ ನೇತೃತ್ವ ಕಾರ್ಮಿಕ ಸಂಘಟನೆಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಬಿಜೆಪಿ ಮುಖಂಡರು ‘ಶ್ರಾದ್ಧ’ಕ್ಕೆ ಹೋಲಿಕೆ ಮಾಡಿದ್ದಾರೆ. ಆದರೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ‘ಫ್ಯಾಶಿಸಂನ ಶ್ರಾದ್ಧ ದಿನ’ ಸಮೀಪಿಸುತ್ತಿದೆ. ಮುಷ್ಕರಕ್ಕೆ ಕರೆ ನೀಡಿರುವ ಕಾರ್ಮಿಕ ಸಂಘಟನೆಗಳ ಜತೆ ಮಾತುಕತೆ ಮಾಡುವ ಕನಿಷ್ಠ ಸೌಜನ್ಯವೂ ಪ್ರಧಾನಿ ಮೋದಿಗೆ ಇಲ್ಲ. ಹೀಗಾಗಿ ಅನಿವಾರ್ಯವಾಗಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ನಮ್ಮ ಮುಷ್ಕರ ರಾಜಕೀಯ ಪ್ರೇರಿತವಲ್ಲ. ಕಾರ್ಮಿಕರ ಹಿತ ಹಾಗೂ ದೇಶದ ಭವಿಷ್ಯದ ದೃಷ್ಟಿಯಿಂದ ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ’
-ಎಚ್.ವಿ.ಅನಂತಸುಬ್ಬರಾವ್ ಎಐಟಿಯುಸಿ ಅಧ್ಯಕ್ಷ
ಅಂಗನವಾಡಿ ಕಾರ್ಯಕರ್ತೆ ಸಾವು
ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ಕಾರವಾರ ಜಿಲ್ಲೆಯ ಮುಂಡಗೋಡು ತಾಲೂಕಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಿಡ್ಲಗುಂಡಿ ಗ್ರಾಮದ ಶಾಂತಾ ಬವಸಣ್ಣೆಪ್ಪ ಚಕ್ರಸಾಲಿ ಎಂಬ ಅಂಗನವಾಡಿ ಕಾರ್ಯಕರ್ತೆ ಮೆರವಣಿಗೆ ಸಂದರ್ಭದಲ್ಲಿ ಕುಸಿದು ಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.







