ಉಡುಪಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಚೆ ನೌಕರರಿಂದ ಧರಣಿ

ಉಡುಪಿ, ಜ.8: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಅಂಚೆ ನೌಕರರ ಸಂಘ ಹಾಗೂ ರಾಷ್ಟ್ರೀಯ ಅಂಚೆ ನೌಕರರ ಸಂಘದ ಉಡುಪಿ ವಿಭಾಗದ ವತಿಯಿಂದ ಮಂಗಳವಾರ ಉಡುಪಿಯ ಮುಖ್ಯ ಅಂಚೆ ಕಚೇರಿ ಎದುರು ಧರಣಿ ನಡೆಸಲಾಯಿತು.
ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಯನ್ನು ಜಾರಿಗೆ ತರಬೇಕು. ಕಮಲೇಶ್ ಚಂದ್ರ ಸಮಿತಿ ವರದಿಯನ್ನು ಜಾರಿಗೆ ತಂದು ಗ್ರಾಮೀಣ ಡಾಕ್ ನೌಕರರನ್ನು ಶಾಶ್ವತ ನೌಕರನ್ನಾಗಿ ಪರಿಗಣಿಸಬೇಕು. ಅಂಚೆ ಇಲಾಖೆಯ ಖಾಸಗೀಕರಣ ಹಾಗೂ ಹೊರಗುತ್ತಿಗೆಯನ್ನು ನಿಲ್ಲಿಸಬೇಕು. ವಾರಕ್ಕೆ ಐದು ದಿನ ಕೆಲಸ ನಿಯಮವನ್ನು ಜಾರಿಗೆ ತರಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಹೇಮಂತ್ ಕುಮಾರ್, ಸುರೇಶ್ ಕೆ., ವಾಸುದೇವ ತೊಟ್ಟಂ, ಬಾಲಚಂದ್ರ ಕೆ.ಆರ್., ಹಿರಿಯಣ್ಣ ಮಡಿ ವಾಳ, ಗಿಲ್ಬರ್ಟ್ ಲೋಬೊ, ಜನಾರ್ದನ್, ಅಶ್ವಥ್ ಕುಮಾರ್, ಟಿ.ಆನಂದ ಮರಕಲ, ಎಚ್.ಉಮೇಶ್ ನಾಯ್ಕ, ಎನ್.ಎ.ನೇಜಾರು, ವಿಜಯ ನಾಯರಿ, ಸುಧಾಕರ್, ಸುಭಾಶ್ ತಿಂಗಳಾಯ, ಪ್ರವೀಣ್ ಜತ್ತನ್ನ ಮೊದಲಾದ ವರು ಉಪಸ್ಥಿತರಿದ್ದರು.





