ಉಡುಪಿ: ಮೀನುಗಾರರ ನಿಯೋಗದಿಂದ ಸಚಿವ ಅರುಣ್ ಜೇಟ್ಲಿ ಭೇಟಿ

ಉಡುಪಿ, ಜ.8: ಮೀನುಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಮೀನುಗಾರರ ವೇದಿಕೆಯ ನಿಯೋಗ ಇಂದು ದೆಹಲಿ ಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಡಿಸೇಲ್ ತೆರಿಗೆ ವಿನಾಯಿತಿ, ನಾಪತ್ತೆಯಾದ ಮೀನುಗಾರರ ಪತ್ತೆಗಾಗಿ ಆಧು ನಿಕ ತಂತ್ರಜ್ಞಾನ ಬಳಕೆ, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ, ಜಿಎಸ್‌ಟಿ ಮುಕ್ತ ಮೀನುಗಾರಿಕೆ, ರಿಯಾಯಿತಿ ದರದಲ್ಲಿ ನಾಡದೋಣಿಗೆ ಸೀಮೆಎಣ್ಣೆ ವಿತರಣೆ ಮಾಡುವಂತೆ ಮನವಿಯಲ್ಲಿ ಸಚಿವರನ್ನು ಒತ್ತಾಯಿಸಲಾಯಿತು.
‘ನಾರ್ವೆ ಪ್ರಧಾನಿಯ ಆಗಮನದ ಹಿನ್ನೆಲೆಯಲ್ಲಿ ನಿಗದಿಯಂತೆ ನಿಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರಧಾನಿ ಕಾರ್ಯದರ್ಶಿಗಳಿಗೆ ಮನವಿ ನೀಡಲಾಗಿದೆ. ಅಲ್ಲದೆ ಅಧಿ ವೇಶನದ ಹಿನ್ನೆಲೆಯಲ್ಲಿ ಇತರ ಸಚಿವರನ್ನು ಕೂಡ ಭೇಟಿ ಮಾಡಲು ಸಾಧ್ಯವಾಗ ಲಿಲ್ಲ’ ಎಂದು ನಿಯೋಗದಲ್ಲಿರುವ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.
ನಿಯೋಗದಲ್ಲಿ ವೇದಿಕೆಯ ಅಧ್ಯಕ್ಷ ವೆಲ್ಜಿ ಭಾಯಿ ಮಸಾನಿ, ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಮುಖಂಡರಾದ ನಿತಿನ್ ಬೋಳೂರು, ಮನೋಹರ್ ಬೋಳೂರು, ಇಬ್ರಾಹಿಂ ಮಂಗಳೂರು, ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ರಘುಪತಿ ಭಟ್ ಮೊದಲಾದವರು ಹಾಜರಿದ್ದರು.







