ಡಿಜಿಟಲ್ ಪಾವತಿಯ ಉನ್ನತ ಮಟ್ಟದ ಸಮಿತಿ ಅಧ್ಯಕ್ಷರಾಗಿ ನಂದನ್ ನೀಲೇಕಣಿ

ಹೊಸದಿಲ್ಲಿ, ಜ. 9: ಡಿಜಿಟಲ್ ಪಾವತಿಯನ್ನು ಇನ್ನಷ್ಟು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ದ ಮುಖ್ಯಸ್ಥ ನಂದನ್ ನೀಲೇಕಣಿ ಅವರನ್ನು ಐವರು ಸದಸ್ಯರ ಉನ್ನತ ಮಟ್ಟದ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
ಪಾವತಿಯನ್ನು ಡಿಜಿಟಲೀಕರಣಗೊಳಿಸುವುದನ್ನು ಉತ್ತೇಜಿಸಲು ಹಾಗೂ ಡಿಜಿಟಲೀಕರಣದ ಮೂಲಕ ಆರ್ಥಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಈ ಉನ್ನತ ಮಟ್ಟದ ಸಮಿತಿಯನ್ನು ರೂಪಿಸಲು ನಿರ್ಧರಿಸಿದೆ ಎಂದು ಆರ್‌ಬಿಐ ಹೇಳಿಕೆ ತಿಳಿಸಿದೆ. ಸಮಿತಿ ತನ್ನ ಮೊದಲ ಸಭೆಯ ಬಳಿಕ 90 ದಿನಗಳ ಒಳಗೆ ವರದಿಯನ್ನು ಸಲ್ಲಿಸಲಿದೆ ಎಂದು ಅದು ಹೇಳಿದೆ.
ಆರ್‌ಬಿಐಯ ಘೋಷಿಸಿದ ಸಮಿತಿಯ ಇತರ ನಾಲ್ವರು ಸದಸ್ಯರೆಂದರೆ ಆರ್ ಬಿಐಯ ಮಾಜಿ ಉಪ ಗವರ್ನರ್ ಎಚ್.ಆರ್. ಖಾನ್, ವಿಜಯಾ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಸನ್ಸಿ, ಮಾಹಿತಿ ತಂತ್ರಜ್ಞಾನ ಹಾಗೂ ಉಕ್ಕು ಸಚಿವಾಲಯದ ಮಾಜಿ ಕಾರ್ಯದರ್ಶಿ ಅರುಣ್ ಶರ್ಮಾ ಹಾಗೂ ಅಹ್ಮದಾಬಾದ್ ಐಐಎಂನ ಸಿಐಐಇಯ ಮುಖ್ಯ ಆವಿಷ್ಕಾರ ಅಧಿಕಾರಿ ಸಂಜಯ್ ಜೈನ್.
ದೇಶದಲ್ಲಿ ಈಗ ಇರುವ ಡಿಜಿಟಿಲೀಕರಣದ ಸ್ಥಿತಿಯ ಮರು ಪರಿಶೀಲನೆ, ಈ ವ್ಯವಸ್ಥೆಯಲ್ಲಿ ಈಗ ಇರುವ ಅಂತರ ಹಾಗೂ ಅದನ್ನು ಜೋಡಿಸಲು ಸಲಹೆಗಳ ಕುರಿತು ಸಮಿತಿಯ ಪ್ರಮುಖವಾಗಿ ಗಮನ ಹರಿಸಲಿದೆ.







