ಸ್ಟರ್ಲೈಟ್ ಘಟಕ ಮರು ಆರಂಭಿಸಲು ಎನ್‌ಜಿಟಿ ನೀಡಿದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಣೆ

ಹೊಸದಿಲ್ಲಿ, ಜ. 8: ತೂತುಕುಡಿಯಲ್ಲಿ ವೇದಾಂತ ಸ್ಟರ್ಲೈಟ್ ತಾಮ್ರ ಘಟಕ ಮುಚ್ಚುವ ತಮಿಳುನಾಡು ಸರಕಾರದ ನಿರ್ಧಾರ ತಿರಸ್ಕರಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನೀಡಿದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಘಟಕ ಮರು ಆರಂಭಿಸಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನೀಡಿದ ಆದೇಶ ಪ್ರಶ್ನಿಸಿ ತಮಿಳುನಾಡು ಸರಕಾರ ಸಲ್ಲಿಸಿದ ಮೇಲ್ಮನವಿಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ನೇತೃತ್ವದ ಪೀಠ ತಮಿಳುನಾಡು ಸರಕಾರಕ್ಕೆ ಸೂಚಿಸಿದೆ. ಸ್ಟರ್ಲೈಟ್ ತಾಮ್ರ ಘಟಕಕ್ಕೆ ಸಂಬಂಧಿಸಿ ಕಳೆದ ವರ್ಷ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ವಿವಿಧ ಆದೇಶಗಳನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ‘ತಪ್ಪಾಗಿ’ ಬದಿಗೆ ಸರಿಸಿದೆ ಎಂದು ಪ್ರತಿಪಾದಿಸಿ ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ವೇದಾಂತ ಲಿಮಿಟೆಡ್‌ಗೆ ಅಪಾಯಕಾರಿ ವಸ್ತುಗಳನ್ನು ನಿರ್ವಹಿಸುವ ಹಾಗೂ ಅನುಮತಿ ಪರಿಷ್ಕರಿಸಲು ಹೊಸ ಆದೇಶ ನೀಡಲು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿರ್ದೇಶನ ನೀಡಿತ್ತು. ಇದು ಸಮರ್ಥನೀಯವಲ್ಲ ಎಂದು ಸ್ಟರ್ಲೈಟ್ ತಾಮ್ರ ಘಟಕ ಮುಚ್ಚಲು ತಮಿಳುನಾಡು ಸರಕಾರ ನೀಡಿದ್ದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಡಿಸೆಂಬರ್ 13ರಂದು ಬದಿಗೆ ಸರಿಸಿತ್ತು.





