ಸನ್ಮಾನವನ್ನು ಗೌರವ ಪೂರ್ವಕವಾಗಿ ನಿರಾಕರಿಸಿದ್ದ ಡಾ.ಮಧುಕರ ಶೆಟ್ಟಿ: ಅಜಿತ್ ಕುಮಾರ್
ಮಧುಕರ ಶೆಟ್ಟಿ ಸ್ಮರಣಾರ್ಥ ಸಾಧಕರಿಗೆ ಪ್ರತಿವರ್ಷ ಬಂಟರ ಸಂಘದಿಂದ ಸನ್ಮಾನ

ಮಂಗಳೂರು, ಜ.8: ಹಲವು ಬಾರಿ ಸನ್ಮಾನ ಕಾರ್ಯಕ್ರಮ ನಡೆಸುವುದಾಗಿ ಮನವಿ ಮಾಡಿಕೊಂಡಿದ್ದರೂ ಅವರು ನಯವಾಗಿ ಅದನ್ನು ತಿರಸ್ಕರಿಸಿದ್ದ ನಿಷ್ಠಾವಂತ ಅಧಿಕಾರಿಯಾಗಿದ್ದರು. ಅವರ ಹೆಸರಿನಲ್ಲಿ ಚಿನ್ನದ ಪದಕವನ್ನು ನೀಡಿ ಸಾಧಕರೊಬ್ಬರಿಗೆ ಪ್ರತಿವರ್ಷ ಸನ್ಮಾನ ಮಾಡುವುದಾಗಿ ಬಂಟರಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದ್ದಾರೆ.
ಡಾ. ಮಧುಕರ ಶೆಟ್ಟಿಯಿಂದ ಹಲವು ಸಂಗತಿಗಳನ್ನು ನಾನು ಕಲಿತೆ:- ಭೃಷ್ಟಾಚಾರ, ಅಪ್ರಮಾಣಿಕತೆ ತುಂಬಿರುವ ನಮ್ಮ ಸಮಾಜದ ನಡುವೆ ಡಾ. ಮಧುಕರ ಶೆಟ್ಟಿ ಈ ನಾಡಿಗೆ ಮಾದರಿಯಾಗುವ ವ್ಯಕ್ತಿತ್ವ. ಅವರಂತಹ ಯುವ ಅಧಿಕಾರಿಯಿಂದ ನಾನು ಸಾಕಷ್ಟು ಕಲಿತಿದ್ದೇನೆ. ಆತನ ಸೇವೆ ಈ ನಾಡಿಗೆ ಇನ್ನೂ ಅಗತ್ಯವಾಗಿತ್ತು .ಅಧಿಕಾರದಲ್ಲಿರುವವರು ಮಾಡುವ ಅವ್ಯವಹಾರ ಭೃಷ್ಟಾಚಾರವನ್ನು ತಿಳಿಯಬೇಕಾದರೆ ಲೋಕಾಯುಕ್ತ ಅಧಿಕಾರಿಯಾಗಬೇಕು. ಅಂತಹ ಲೋಕಾಯುಕ್ತದಲ್ಲಿ ದಕ್ಷ ಪ್ರಮಾಣಿಕ ಅಧಿಕಾರಿಯಾಗಿ ಯಾವ ಪ್ರಭಾವಗಳಿಗೂ ಮಣಿಯದೆ ಕಾರ್ಯನಿರ್ವಹಿಸಿದ ಯುವ ಅಧಿಕಾರಿ ಡಾ. ಮಧುಕರ ಶೆಟ್ಟಿ ಎಂದು ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ತಿಳಿಸಿದ್ದಾರೆ.
ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಮನಪಾ ಮೇಯರ್ ಭಾಸ್ಕರ .ಕೆ, ಭಾರತ ಸರಕಾರದ ಮಾಜಿ ರಾಯಭಾರಿ ಕಚೇರಿ ಅಧಿಕಾರಿ ಬಾಲಕೃಷ್ಣ ಶೆಟ್ಟಿ, ಎ.ಜೆ.ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ.ಶೆಟ್ಟಿ ನುಡಿನಮನ ಸಲ್ಲಿಸಿದರು. ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ವಸಂತ ಶೆಟ್ಟಿ ವಂದಿಸಿದರು.





