ಆರ್ಥಿಕ ದುರ್ಬಲ ಮೇಲ್ಜಾತಿಗೆ ಮೀಸಲಾತಿ: ಪ.ಜಾ., ಪ.ಪಂ. ಹೋರಾಟಗಾರರ ವಿರೋಧ

ಹೊಸದಿಲ್ಲಿ, ಜ. 8: ಆರ್ಥಿಕವಾಗಿ ದುರ್ಬಲರಾಗಿರುವ ಮೇಲ್ಜಾತಿಗಳಿಗೆ ಮೀಸಲಾತಿ ನೀಡುವ ಸರಕಾರದ ನಿರ್ಧಾರವನ್ನು ಟೀಕಿಸಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಾಮಾಜಿಕ ಹೋರಾಟಗಾರರು ಹಾಗೂ ಬುದ್ಧಿಜೀವಿಗಳು ಇದು ಸಂವಿಧಾನ ವಿರೋಧಿ ನಡೆ ಎಂದಿದ್ದಾರೆ.
ಮೀಸಲಾತಿಗೆ ಆಧಾರ ಚಾರಿತ್ರಿಕ ಅಸಮಾನತೆ ಹಾಗೂ ಕಡಿಮೆ ಪ್ರಾತಿನಿಧ್ಯತೆ. ಬಡತನ ಅಲ್ಲ ಎಂದು ಹೋರಾಟಗಾರರು ಹೇಳಿದ್ದಾರೆ. ಮೀಸಲಾತಿ ಬಡತನ ನಿರ್ಮೂಲನೆ ಕಾರ್ಯಕ್ರಮ ಅಲ್ಲ. ಇದು ಸಹಸ್ರಾರು ವರ್ಷಗಳಿಂದ ಸಂಸ್ಥೆಗಳಿಂದ ನಿರಾಕರಿಸಲ್ಪಟ್ಟ ಜನರ ಪ್ರತಿನಿಧಿತ್ವದ ಪ್ರಶ್ನೆ. ಆರ್ಥಿಕ ದುರ್ಬಲ ಮೇಲ್ಜಾತಿಗೆ ಮೀಸಲಾತಿ ನೀಡುತ್ತಿರುವುದು ಸರಕಾರದ ಅಸಹ್ಯ ನಡೆ ಹಾಗೂ ರಾಜಕೀಯ ತಂತ್ರ ಎಂದು ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪ್ರಾದ್ಯಾಪಕ ವಿವೇಕ್ ಕುಮಾರ್ ಹೇಳಿದ್ದಾರೆ.
ಸರಕಾರದ ಯಾವುದೇ ಮಟ್ಟದಲ್ಲಿ ಮೇಲ್ಜಾತಿಯ ಜನರ ಪ್ರತಿನಿಧಿತ್ವ ಕಡಿಮೆ ಇಲ್ಲ ಎಂದು ನ್ಯಾಶನಲ್ ಕಾನ್ಫೆಡರೇಶನ್ಸ್ ಆಫ್ ದಲಿತ್ ಆರ್ಗನೈಶೇಷನ್‌ನ ಅದ್ಯಕ್ಷ ಅಶೋಕ್ ಭಾರ್ತಿ ಹೇಳಿದ್ದಾರೆ. ಜನಸಂಖ್ಯೆಯಲ್ಲಿ ತಮ್ಮ ಪಾಲಿಗಿಂತ ಹೆಚ್ಚು ಪ್ರತಿನಿಧಿಕರಣ ಇರುವ ಜನರಿಗೆ ಮೀಸಲಾತಿ ನೀಡುವುದು ಸಂವಿಧಾನದ ಪ್ರಕಾರ ಸರಿಯಾದುದಲ್ಲ. ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆ ಹಾಗೂ ಮೇಲ್ಜಾತಿಗಳ ತುಷ್ಠೀಕರಣ ಎಂದು ಅವರು ಹೇಳಿದ್ದಾರೆ.





