ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ನವೀನ ಕಟ್ಟಡ ಲೋಕಾರ್ಪಣೆ

ಮಂಗಳೂರು, ಜ.8: ದ.ಕ. ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯದ ನವ ವಿಸ್ತರಿತ ಕಟ್ಟಡವು ಜ.12ರಂದು ಲೋಕಾರ್ಪಣೆಗೊಳ್ಳಲಿದೆ.
ಈ ಏಳು ಮಹಡಿಯ ಹೊಸ ಕಟ್ಟಡದ ಉದ್ಘಾಟನೆಯನ್ನು ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಪತಿಗಳಾದ ಎನ್.ವಿನಯ್ ಹೆಗ್ಡೆ ನೆರವೇರಿ ಸಲಿದ್ದಾರೆ. ಸರ್ವಜನರ ದಂತ ಆರೋಗ್ಯದ ಸೇವೆಯನ್ನು 1985 ನೇ ಇಸವಿಯಿಂದ ಉಚಿತಾರ್ಥವಾಗಿ ನೀಡಿ ದ.ಕ. ಜಿಲ್ಲೆ, ನೆರೆಜಿಲ್ಲೆಗಳು ಮಾತ್ರವಲ್ಲದೇ ನೆರೆಯ ರಾಜ್ಯದಲ್ಲೂ ತನ್ನ ವಿಶಿಷ್ಟ ಕೊಡುಗೆಯನ್ನು ನೀಡಿ ಭಾರತದ 5 ಉತ್ಕೃಷ್ಟ ದಂತ ಕಾಲೇಜುಗಳಲ್ಲೊಂದು ಎಂಬ ಹಿರಿಮೆಗೆ ಪಾತ್ರವಾಗಿದೆ.
ನಿಟ್ಟೆ ವಿದ್ಯಾಸಂಸ್ಥೆ ಕೇವಲ ನಗರದಲ್ಲಿ ತನ್ನ ಆರೋಗ್ಯ ಸೇವೆಯನ್ನು ಸೀಮಿತಗೊಳಿಸದೆ ಸುಮಾರು 150 ಕಿ.ಮೀ.ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ 21 ದಂತ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಉಚಿತವಾಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೇವೆಗಳನ್ನು ಯಶಸ್ವಿಯಾಗಿ ನೀಡುತ್ತಿದೆ.
ನಗರದ ದೇರಳಕಟ್ಟೆಯಲ್ಲಿ 1,20,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯವು, ಇನ್ನೂ 50,000 ಚದರ ಅಡಿ ಹೆಚ್ಚು ವಿಸ್ತೀರ್ಣಗೊಳ್ಳುವುದರ ಮೂಲಕ ತನ್ನ ದಂತ ವೈದ್ಯಕೀಯ ಸೇವೆಯ ಪರಿಮಿತಿಯನ್ನು ಹೆಚ್ಚುಗೊಳಿಸಿದೆ.
ಹೊಸ ಕಟ್ಟಡದಲ್ಲಿ ವಿಶೇಷ ದಂತ ಚಿಕಿತ್ಸಾಲಯ, ಅತ್ಯಾಧುನಿಕ ಇಂಪ್ಲಾಂಟ್ ವಿಭಾಗ, ಸಾರ್ವಜನಿಕ ದಂತ ಆರೋಗ್ಯ ವಿಭಾಗ, ಮಕ್ಕಳ ದಂತ ಚಿಕಿತ್ಸಾ ವಿಭಾಗ, ಅಧುನಿಕ ಉಪಕರಣಗಳನ್ನೊಳಗೊಂಡ ಬಾಯಿ ಮುಖಾಂಗದ ರೋಗ ಪತ್ತೆಯ ವಿಭಾಗ ಮತ್ತು ವಿಶೇಷ ಅಗತ್ಯವುಳ್ಳ ಮಕ್ಕಳ ವಿಭಾಗದ ಸೇವೆಯ ಸೌಲಭ್ಯ ಲಭ್ಯವಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.







