ಮುಂಬೈ: ಬೆಸ್ಟ್ ಸಿಬ್ಬಂದಿಗಳ ಅನಿರ್ದಿಷ್ಟಾವಧಿ ಮುಷ್ಕರ; ರಸ್ತೆಗಿಳಿಯದ 3,000 ಬಸ್‌ಗಳು
ಮುಂಬೈ,ಜ.8: ಮುಂಬೈ ಮಹಾನಗರದಲ್ಲಿ ಸಾರ್ವಜನಿಕ ಸಾರಿಗೆಯನ್ನು ನಿರ್ವಹಿಸುತ್ತಿರುವ ಬೆಸ್ಟ್ ಸಂಸ್ಥೆಯ ಸಿಬ್ಬಂದಿ ಸೋಮವಾರ ರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ತೊಡಗಿದ್ದು, ಮಂಗಳವಾರ ಸುಮಾರು 3,000 ಬಸ್‌ಗಳು ರಸ್ತೆಗಿಳಿದಿರಲಿಲ್ಲ. ಬೆಸ್ಟ್ ಸಂಯುಕ್ತ ಕಾಮಗಾರ್ ಕೃತಿ ಸಮಿತಿಯು ಕರೆ ನೀಡಿರುವ ಈ ಮುಷ್ಕರದಿಂದಾಗಿ ಸುಮಾರು 25 ಲಕ್ಷ ಪ್ರಯಾಣಿಕರು ಬಾಧಿತರಾಗಿದ್ದಾರೆ.
ಕಂಪನಿಯ ಮುಂಗಡಪತ್ರವನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆಯ ಮುಂಗಡಪತ್ರದೊಂದಿಗೆ ವಿಲೀನಗೊಳಿಸಬೇಕು, ನೇಮಕಾತಿಗಳನ್ನು ಪುನರಾರಂಭಿಸಬೇಕು, ವೇತನವನ್ನು ಹೆಚ್ಚಿಸಬೇಕು ಮತ್ತು ಸಿಬ್ಬಂದಿಗಳ ವಸತಿ ಸಮಸ್ಯೆಯನ್ನು ಬಗೆಹರಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರವನ್ನು ನಡೆಸಲಾಗುತ್ತಿದೆ. ಈ ಮುಷ್ಕರವು ಕಾರ್ಮಿಕ ಒಕ್ಕೂಟಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಸಂಬಂಧಿಸಿಲ್ಲ.
ಬೆಸ್ಟ್ ಸಿಬ್ಬಂದಿಗಳ ಮುಷ್ಕರದಿಂದಾಗಿ ಖಾಸಗಿ ಬಸ್ ನಿಲುದಾಣಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು.
ಮುಷ್ಕರವನ್ನು ಅಕ್ರಮವೆಂದು ಘೋಷಿಸಿದ್ದ ಬೆಸ್ಟ್ ಆಡಳಿತ ಮಂಡಳಿಯು,ಮುಷ್ಕರದಲ್ಲಿ ತೊಡಗುವವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಮುಷ್ಕರದ ವಿರುದ್ಧ ಅದು ಸೋಮವಾರ ನ್ಯಾಯಾಲಯದ ಮೆಟ್ಟಿಲುಗಳನ್ನೇರಿತ್ತು. ಮುಷ್ಕರವನ್ನು ನ್ಯಾಯಾಲಯವು ನಿರ್ಬಂಧಿಸಿದ್ದರೂ ಸಿಬ್ಬಂದಿಗಳು ಅದನ್ನು ಲೆಕ್ಕಿಸದೆ ಮುಷ್ಕರವನ್ನಾರಂಭಿಸಿದ್ದಾರೆ.
ಮಹಾರಾಷ್ಟ್ರ ಸರಕಾರವು ಮುಷ್ಕರನಿರತರ ವಿರುದ್ಧ ಎಸ್ಮಾ ಕಾಯ್ದೆಯನ್ನು ಹೇರಬಹುದೆಂದು ಮೂಲಗಳು ತಿಳಿಸಿವೆ.