ಕ್ಲೀನ್‌ಸ್ವೀಪ್ ಸಾಧಿಸಿದ ನ್ಯೂಝಿಲೆಂಡ್
ಟೇಲರ್, ನಿಕೊಲಸ್ ಭರ್ಜರಿ ಶತಕ

ವೆಲ್ಲಿಂಗ್ಟನ್(ನ್ಯೂಝಿಲೆಂಡ್), ಜ.8: ರಾಸ್ ಟೇಲರ್ ಹಾಗೂ ಹೆನ್ರಿ ನಿಕೊಲಸ್ ಅವರ ಭರ್ಜರಿ ಶತಕಗಳ ನೆರವಿನಿಂದ ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕಿವೀಸ್ 115 ರನ್‌ಗಳ ಜಯ ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು 3-0ಯಿಂದ ಗೆದ್ದು ಬೀಗಿದೆ.
ಟಾಸ್ ಗೆದ್ದು ನ್ಯೂಝಿಲೆಂಡ್‌ನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ಶ್ರೀಲಂಕಾಕ್ಕೆ ಲಸಿತ್ ಮಾಲಿಂಗ ಉತ್ತಮ ಆರಂಭ ಒದಗಿಸಿಕೊಟ್ಟರು. ಕಿವೀಸ್‌ನ ಸ್ಕೋರ್ 31 ರನ್‌ಗಳ ಆಗುವಷ್ಟರಲ್ಲಿ ಕಾಲಿನ್ ಮುನ್ರೊ ಹಾಗೂ ಮಾರ್ಟಿನ್ ಗಪ್ಟಿಲ್‌ರನ್ನು ಮಾಲಿಂಗ ಪೆವಿಲಿಯನ್‌ಗೆ ಅಟ್ಟಿದರು. ನಾಯಕ ವಿಲಿಯಮ್ಸನ್ ಅರ್ಧಶತಕ(64) ಸಿಡಿಸಿದರೆ, ಟೇಲರ್(137) ಹಾಗೂ ನಿಕೊಲಸ್(ಅಜೇಯ 124) ಭರ್ಜರಿ ಶತಕಗಳ ಮೂಲಕ ನ್ಯೂಝಿಲೆಂಡ್ 364 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಆ ತಂಡದ ಒಟ್ಟು 4 ವಿಕೆಟ್ ಉರುಳಿದವು. ಕೊನೆಯ 10 ಓವರ್‌ಗಳಲ್ಲಿ 130 ರನ್‌ಗಳು ಹರಿದುಬಂದಿದ್ದು, ಕಿವೀಸ್ ಬೃಹತ್ ಮೊತ್ತಕ್ಕೆ ಕಾರಣವಾಯಿತು.
ಲಂಕಾ ಪರ ಲಸಿತ್ ಮಾಲಿಂಗ 3 ವಿಕೆಟ್ ಉರುಳಿಸಿ ಯಶಸ್ವಿ ಬೌಲರ್ ಎನಿಸಿದರು.
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಲಂಕಾಗೆ ಡಿಕ್ವೆಲ್ಲಾ(46) ಹಾಗೂ ಧನಂಜಯ ಡಿಸಿಲ್ವಾ(36) ಉತ್ತಮ ಆರಂಭ ಒದಗಿಸಿದರು. ಕುಸಾಲ್ ಪೆರೇರ(43) ಹಾಗೂ ಕಳೆದ ಪಂದ್ಯದ ಹೀರೊ ತಿಸಾರ ಪೆರೇರ ಭರ್ಜರಿ ಅರ್ಧಶತಕ(80) ಶ್ರೀಲಂಕಾಗೆ ಗೆಲುವಿನ ಭರವಸೆ ಮೂಡಿಸಿದ್ದವು. ಆದರೆ ಲಂಕಾ ದಿಢೀರ್ ಕುಸಿತ ಕಂಡು ಸೋಲು ಅನುಭವಿಸಿ ನಿರಾಶೆ ಮೂಡಿಸಿತು. 249 ರನ್‌ಗೆ ಅದು ಆಲೌಟ್ ಆಯಿತು. ಕಿವೀಸ್ ಪರ ಲಾಕಿ ಫರ್ಗ್ಯುಸನ್ 4 ಹಾಗೂ ಇಶ್ ಸೋಧಿ 3 ವಿಕೆಟ್ ಪಡೆದರು.
ಪಂದ್ಯಕ್ಕೆ ತಿರುವು ನೀಡಿದ ಕಾ್ಯಚ್
ಶ್ರೀಲಂಕಾದ ಇನಿಂಗ್ಸ್‌ನಲ್ಲಿ 80 ರನ್ ಗಳಿಸಿ ಕಿವೀಸ್‌ಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದ ತಿಸಾರ ಪೆರೇರ ಅವರು ಮಾರ್ಟಿನ್ ಗಪ್ಟಿಲ್ ಅವರ ಅಮೋಘ ಕ್ಯಾಚ್‌ಗೆ ಬಲಿಯಾದದ್ದು ಪಂದ್ಯದ ಚಿತ್ರಣವನ್ನೇ ಬದಲಿಸಿತು. ತಮ್ಮ ತಲೆಯ ಮೇಲೆ ಹಾದು ಹೋಗುತ್ತಿದ್ದ ಚೆಂಡನ್ನು ಎತ್ತರಕ್ಕೆ ಜಿಗಿದು ಬೆರಳಿನ ತುದಿಯಲ್ಲಿ ಹಿಡಿದ ಗಪ್ಟಿಲ್ ಹೀರೊ ಆದರು. ಈ ವೇಳೆ ಶ್ರೀಲಂಕಾ 244 ರನ್ 6 ವಿಕೆಟ್ ಕಳೆದುಕೊಂಡಿತು. ಇನ್ನೂ 11 ಓವರ್ ಬಾಕಿ ಇದ್ದವು. ಆದರೆ ಕೇವಲ 5 ರನ್‌ಗಳ ಅಂತರದಲ್ಲಿ ಅದು ಉಳಿದ 4 ವಿಕೆಟ್‌ಗಳನ್ನು ಕಳೆದುಕೊಂಡಿತು.
ಸಂಕ್ಷಿಪ್ತ ಸ್ಕೋರ್
► ನ್ಯೂಝಿಲೆಂಡ್: 50 ಓವರ್‌ಗಳಲ್ಲಿ 364/4 (ಟೇಲರ್ 137, ನಿಕೊಲಸ್ ಅಜೇಯ 124, ಮಾಲಿಂಗ 93ಕ್ಕೆ3)
► ಶ್ರೀಲಂಕಾ: 41.4 ಓವರ್‌ಗಳಲ್ಲಿ 249 ಆಲೌಟ್( ಪೆರೇರ 80, ಡಿಕ್ವೆಲ್ಲಾ 46, ಫರ್ಗ್ಯುಸನ್ 40ಕ್ಕೆ 4)







