ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್‌ಗೆ ಪಾಟ್ನಾ ವಿಮಾನ ನಿಲ್ದಾಣದಲ್ಲಿ ವಿಐಪಿ ಸೌಲಭ್ಯ ಸ್ಥಗಿತ

ಹೊಸದಿಲ್ಲಿ, ಜ. 8: ಪಾಟ್ನಾದ ಜಯಪ್ರಕಾಶ್ ನಾರಾಯಣ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಟರ್ಮ್ಯಾಕ್ (ವಿಮಾನ ಸಂಚರಿಸುವ ರಸ್ತೆ) ನಿಂದ ನಡೆದುಕೊಂಡು ಬರುತ್ತಿರುವುದು ಕಂಡು ಬಂದಿದ್ದು, ಇದು ಅವರ ವಿಐಪಿ ಸೌಲಭ್ಯದ ಪ್ರಶ್ನೆಗಳನ್ನು ಎತ್ತಿದೆ.
ಈ ಹಿಂದೆ ಪಾಸ್ವಾನ್ ಅವರಿಗೆ ವಿಮಾನ ಹತ್ತುವ ಟರ್ಮ್ಯಾಕ್ ವರೆಗೆ ವಿಮಾನ ನಿಲ್ದಾಣದ ವಾಹನದ ಮೂಲಕ ಸಂಚರಿಸುವ ಸೌಲಭ್ಯ ನೀಡಲಾಗಿತ್ತು.
‘‘ಇಲ್ಲಿನ ವಿಮಾನ ನಿಲ್ದಾಣದಲ್ಲಿ ನನಗೆ ನೀಡಿದ ಸೌಲಭ್ಯದ ಅವಧಿ ಡಿಸೆಂಬರ್ 30ರಂದು ಅಂತ್ಯಗೊಂಡಿದೆ. ಆದರೆ, ನನಗೆ ಸರಿಯಾದ ಸಮಯಕ್ಕೆ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ನಾನು ಆ ದಿಶೆಯಲ್ಲಿ ಕಾರ್ಯ ಪ್ರವೃತ್ತನಾಗಿದ್ದೇನೆ. ಚಿಂತೆ ಏನೂ ಇಲ್ಲ. ಶೀಘ್ರದಲ್ಲಿ ನಾನು ಮತ್ತೆ ವಿಐಪಿ ಸೌಲಭ್ಯ ಪಡೆಯಲಿದ್ದೇನೆ’’ ಎಂದು ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಕೇಂದ್ರದ ಮಾಜಿ ಸಚಿವ ಜಯ ನಾರಾಯಣ ನಿಶಾದ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸೋಮವಾರ ಬೆಳಗ್ಗೆ ಪಾಟ್ನಾ ವಿಮಾನ ನಿಲ್ದಾಣಕ್ಕೆ ಹೋದ ಸಂದರ್ಭ ಪಾಸ್ವಾನ್ ಅವರಿಗೆ ಈ ಅನುಭವ ಆಗಿದೆ. ಅವರು ಅದೇ ದಿನ ಸಂಜೆ ವಿಮಾನದಲ್ಲಿ ದಿಲ್ಲಿಗೆ ಮರಳಿದ್ದಾರೆ.
ಪಾಟ್ನಾ ವಿಮಾನ ನಿಲ್ದಾಣದಲ್ಲಿ ಬಿಜೆಪಿಯ ಹಿರಿಯ ನಾಯಕ ಶತ್ರುಘ್ನ ಸಿನ್ಹ ಅವರಿಗೆ ವಿಐಪಿ ಸೌಲಭ್ಯ ನಿರಾಕರಿಸಿರುವುದು ವರದಿಯಾದ ಬಳಿಕ ಈ ಘಟನೆ ನಡೆದಿದೆ. ಯಾರೊಬ್ಬರ ವಿಐಪಿ ಸೌಲಭ್ಯವನ್ನು ಮುಂದುವರಿಸುವುದು ಅಥವಾ ಸ್ಥಗಿತಗೊಳಿಸುವುದರಲ್ಲಿ ವಿಮಾನ ನಿಲ್ದಾಣದ ಪಾತ್ರ ಇಲ್ಲ ಎಂದು ಜಯಪ್ರಕಾಶ್ ನಾರಾಯಣ್ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಂದ್ರ ಸಿಂಗ್ ಲಹೌರಿಯಾ ತಿಳಿಸಿದ್ದಾರೆ.