ಬುಮ್ರಾಗೆ ವಿಶ್ರಾಂತಿ, ಮುಹಮ್ಮದ್ ಸಿರಾಜ್‌ಗೆ ಅವಕಾಶ
ಆಸ್ಟ್ರೇಲಿಯ, ಕಿವೀಸ್ ವಿರುದ್ಧ ಸರಣಿ

ಸಿಡ್ನಿ, ಜ.8: ಭರ್ಜರಿ ಫಾರ್ಮ್‌ನಲ್ಲಿರುವ ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾರನ್ನು ಮುಂಬರುವ ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿ ಹಾಗೂ ನ್ಯೂಝಿಲೆಂಡ್ ವಿರುದ್ಧ ಸೀಮಿತ ಓವರ್ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ಈ ಎರಡು ಸರಣಿಯಲ್ಲಿ ಬುಮ್ರಾರಿಂದ ತೆರವಾದ ಸ್ಥಾನಕ್ಕೆ ಹೈದರಾಬಾದ್ ಯುವ ವೇಗಿ ಮುಹಮ್ಮದ್ ಸಿರಾಜ್ ಆಯ್ಕೆಯಾಗಿದ್ದಾರೆ. ಮುಂದಿನ ತಿಂಗಳು ನ್ಯೂಝಿಲೆಂಡ್‌ನಲ್ಲಿ ನಡೆಯಲಿರುವ ಟಿ-20 ಸರಣಿಗೆ ಸಿದ್ಧ್ದಾರ್ಥ್ ಕೌಲ್ ಸ್ಥಾನ ಪಡೆದಿದ್ದಾರೆ.
ಬುಮ್ರಾ ಆಸೀಸ್ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಟ್ಟು 21 ವಿಕೆಟ್‌ಗಳನ್ನು ಪಡೆದು ಆಸ್ಟ್ರೇಲಿಯದ ಸ್ಪಿನ್ನರ್ ನಥಾನ್ ಲಿಯೊನ್‌ರೊಂದಿಗೆ ಸರಣಿಯ ಜಂಟಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಬೌಲರ್‌ನ ಕೆಲಸದ ಒತ್ತಡವನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ವದೇಶದಲ್ಲಿ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯುವ ಆಸ್ಟ್ರೇಲಿಯ ವಿರುದ್ಧ ಏಕದಿನ ಹಾಗೂ ಟಿ-20 ಸರಣಿಯ ಹಿನ್ನೆಲೆಯಲ್ಲಿ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಬುಮ್ರಾ ಆಸೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಒಟ್ಟು 157 ಓವರ್ ಬೌಲಿಂಗ್ ಮಾಡಿದ್ದರು. ಇನ್ನಷ್ಟೇ ಏಕದಿನಕ್ಕೆ ಕಾಲಿಡಬೇಕಾಗಿರುವ ಮುಹಮ್ಮದ್ ಸಿರಾಜ್ ಅವರು ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್ ಪ್ರವಾಸ ಸರಣಿಗೆ ಆಯ್ಕೆಯಾಗಿದ್ದಾರೆ. ಕಿವೀಸ್ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಗೆ ಪಂಜಾಬ್ ವೇಗಿ ಸಿದ್ಧಾರ್ಥ್ ಕೌಲ್‌ಗೆ ಅವಕಾಶ ನೀಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಕೌಲ್ ಈತನಕ 3 ಏಕದಿನ ಹಾಗೂ 2 ಟಿ-20 ಆಡಿದ್ದಾರೆ. ಈಗ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಪಂಜಾಬ್ ಪರ 5 ಪಂದ್ಯಗಳಲ್ಲಿ 22 ವಿಕೆಟ್ ಉರುಳಿಸಿದ್ದಾರೆ.
ಭಾರತ ಶನಿವಾರದಿಂದ ಆಸೀಸ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಆ ನಂತರ 5 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ-20 ಸರಣಿಯನ್ನಾಡಲು ನ್ಯೂಝಿಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಕಿವೀಸ್ ವಿರುದ್ಧ ಸರಣಿಯು ಜ.23ಕ್ಕೆ ಆರಂಭವಾಗಲಿದೆ.
ಆಸ್ಟ್ರೇಲಿಯ,ನ್ಯೂಝಿಲೆಂಡ್ ವಿರುದ್ಧ ಸರಣಿಗೆ ಏಕದಿನ ತಂಡ
► ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪ ನಾಯಕ),ಕೆಎಲ್ ರಾಹುಲ್, ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಎಂಎಸ್ ಧೋನಿ(ವಿಕೆಟ್‌ಕೀಪರ್)ಹಾರ್ದಿಕ್ ಪಾಂಡ್ಯ, ಕುಲ್‌ದೀಪ್ ಯಾದವ್, ಯಜುವೇಂದ್ರ ಚಹಾಲ್,ರವೀಂದ್ರ ಜಡೇಜ, ಭುವನೇಶ್ವರ ಕುಮಾರ್, ಮುಹಮ್ಮದ್ ಸಿರಾಜ್, ಖಲೀಲ್ ಅಹ್ಮದ್, ಮುಹಮ್ಮದ್ ಶಮಿ.
► ಟಿ-20 ತಂಡ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪ ನಾಯಕ), ಕೆ.ಎಲ್. ರಾಹುಲ್, ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಎಂ.ಎಸ್. ಧೋನಿ(ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕುಲ್‌ದೀಪ್ ಯಾದವ್, ಯಜುವೇಂದ್ರ ಚಹಾಲ್, ಭುವನೇಶ್ವರ ಕುಮಾರ್, ಮುಹಮ್ಮದ್ ಸಿರಾಜ್, ಖಲೀಲ್ ಅಹ್ಮದ್, ಸಿದ್ಧಾರ್ಥ್ ಕೌಲ್.
ಸಿರಾಜ್ ಸಾಧನೆ
2018ರ ಮಾರ್ಚ್‌ನಲ್ಲಿ ಶ್ರೀಲಂಕಾದಲ್ಲಿ ಟಿ-20 ಪಂದ್ಯಕ್ಕೆ ಕಾಲಿಟ್ಟಿರುವ ಸಿರಾಜ್ ಜುಲೈನಿಂದ ಭಾರತ ‘ಎ’ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 8 ಪಂದ್ಯಗಳಲ್ಲಿ ಒಟ್ಟು 47 ವಿಕೆಟ್ ಉರುಳಿಸಿದ್ದಾರೆ. ವೆಸ್ಟ್‌ಇಂಡೀಸ್ ‘ಎ’ ವಿರುದ್ಧ ಟಾಂಟನ್‌ನಲ್ಲಿ 132ಕ್ಕೆ 8 ವಿಕೆಟ್ ಪಡೆದಿದ್ದರು. ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ದ.ಆಫ್ರಿಕ ‘ಎ’ ವಿರುದ್ಧ 14 ವಿಕೆಟ್ ಕಬಳಿಸಿದ್ದರು. ಇತ್ತೀಚೆಗೆ ಭಾರತ ‘ಎ’ ತಂಡದೊಂದಿಗೆ ಕಿವೀಸ್‌ಗೆ ತೆರಳಿದ್ದ ಸಿರಾಜ್ 3 ಪ್ರಥಮ ದರ್ಜೆ ಪಂದ್ಯಗಳಲ್ಲಿ 3 ಇನಿಂಗ್ಸ್‌ಗಳಲ್ಲಿ 7 ವಿಕೆಟ್ ಪಡೆದಿದ್ದರು.







