ತ್ರಿರಾಷ್ಟ್ರ ಕಬಡ್ಡಿ ಸರಣಿ: ವೇಳಾಪಟ್ಟಿ ಬದಲಾವಣೆ
ಲಾಹೋರ್, ಜ.8: ಭಾರತ,ಪಾಕಿಸ್ತಾನ ಹಾಗೂ ಇರಾನ್ ದೇಶಗಳನ್ನೊಳಗೊಂಡ ತ್ರಿರಾಷ್ಟ್ರ ಕಬಡ್ಡಿ ಅಂತರ್‌ರಾಷ್ಟ್ರೀಯ ಸರಣಿಯ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
‘‘ಸರಣಿಯು ಪಂಜಾಬ್ ಪ್ರಾಂತ್ಯದಲ್ಲಿರುವ ಜಾಂಗ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಮುಖಾಮುಖಿಯೊಂದಿಗೆ ಮಂಗಳವಾರ ಆರಂಭವಾಗಬೇಕಾಗಿತ್ತು. ಆದರೆ ಟೂರ್ನಿಯು ಜ.10 ರಿಂದ 14ರ ತನಕ ನಡೆಸಲು ಉದ್ದೇಶಿಸಲಾಗಿದೆ’’ಎಂದು ಆಯೋಜಕರು ತಿಳಿಸಿದ್ದಾರೆ.
‘‘ನಮಗೆ ಆಂತರಿಕ ಸಚಿವಾಲಯದಿಂದ ಸುರಕ್ಷತೆಯ ಸಮ್ಮತಿ ಪಡೆಯಲು ಸಾಧ್ಯವಾಗಿಲ್ಲ. ಇದೀಗ ಟೂರ್ನಿಯು ಜ.10 ರಿಂದ ಬಹವಾಲ್ಪುರ್‌ದಲ್ಲಿ ಆರಂಭವಾಗಲಿದೆ. ಸಹಿವಾಲ್‌ನಲ್ಲಿ ಮುಂದುವರಿಯಲಿದ್ದು, 14ರಂದು ಲಾಹೋರ್‌ನಲ್ಲಿ ಕೊನೆಯಾಗಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಭಾರತದ ಕಬಡ್ಡಿ ತಂಡ ಕಬಡ್ಡಿ ಸರಣಿಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯಕ್ಕೆ ತೆರಳಿದೆ. ಇರಾನ್ ಕಬಡ್ಡಿ ಪಟುಗಳು ಹಾಗೂ ಪಾಕ್‌ನ ಕಬಡ್ಡಿ ಅಭಿಮಾನಿಗಳು ಪಾಕಿಸ್ತಾನ ಹಾಗೂ ಭಾರತದ ಆಟಗಾರರ ಮಧ್ಯೆ ನಡೆಯುವ ಪಂದ್ಯವನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.





