ಜಪಾನ್ ಕುಸ್ತಿ ತಾರೆ ಯೋಶಿದಾ ನಿವೃತ್ತಿ

ಟೋಕಿಯೊ, ಜ.8: ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಚಾಂಪಿಯನ್ ಪಟ್ಟ ಧರಿಸಿದ್ದ ಜಪಾನ್‌ನ ಮಹಿಳಾ ಕುಸ್ತಿ ತಾರೆ ಸಾವೊರಿ ಯೋಶಿದಾ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ. 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕವನ್ನು ಜಯಿಸಿರುವ ಯೋಶಿದಾ ಈ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ನನ್ನ 33 ವರ್ಷಗಳ ಕುಸ್ತಿ ವೃತ್ತಿಬದುಕಿಗೆ ವಿದಾಯ ಹೇಳುತ್ತಿರುವೆ. ಪ್ರೋತ್ಸಾಹಿಸಿದ ಹಾಗೂ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ’’ ಎಂದು ಹೇಳಿದ್ದಾರೆ.
ಫ್ರೀಸ್ಟೈಲ್ ಕುಸ್ತಿ ಆಟಗಾರ್ತಿಯಾಗಿದ್ದ ಅವರು 13 ಬಾರಿ ವಿಶ್ವ ಚಾಂಪಿಯನ್ ಪಟ್ಟ ಧರಿಸಿದ್ದಾರೆ. ಇತ್ತೀಚೆಗೆ 2015ರಲ್ಲಿ ಲಾಸ್ ವೆಗಾಸ್‌ನಲ್ಲಿ 53 ಕೆ.ಜಿ. ವಿಭಾಗದಲ್ಲಿ ಪ್ರಶಸ್ತಿ ಕಿರೀಟ ಧರಿಸಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ 36 ವರ್ಷದ ಯೋಶಿದಾ ಭಾಗವಹಿಸುತ್ತಾರೆ ಎಂದು ನಿರೀಕ್ಷೆಯಿಟ್ಟುಕೊಂಡಿದ್ದ ಅಭಿಮಾನಿಗಳಿಗೆ ಅವರ ಈ ನಿರ್ಧಾರ ಆಶ್ಚರ್ಯ ತಂದಿದೆ.
Next Story





