"ಹಸಿವು ನೀಗಿಸಿಕೊಳ್ಳಲು 10ರ ಬಾಲಕ ವಿಷ ಸೇವಿಸಿದ್ದು ನಿಜ"

ಭೋಪಾಲ್, ಜ. 9: ಮಧ್ಯಪ್ರದೇಶದ ರತ್ಲಮ್ ಜಿಲ್ಲೆಯ ಗ್ರಾಮವೊಂದರ ಬುಡಕಟ್ಟು ಜನಾಂಗಕ್ಕೆ ಸೇರಿದ 10 ವರ್ಷದ ಬಾಲಕನೊಬ್ಬ ತನ್ನ ಹಸಿವು ನೀಗಿಸಿಕೊಳ್ಳಲು ಕೀಟನಾಶವನ್ನು ಕುಡಿದು ಚಿಂತಾಜನಕ ಸ್ಥಿತಿಯಲ್ಲಿರುವ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದೆ.
ಆಸ್ಪತ್ರೆಯಲ್ಲಿ ಬಾಲಕ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಪ್ರಕರಣದ ಬಗ್ಗೆ ತನಿಖೆ ಕೈಗೊಂಡ ಆಯೋಗ, ಹಸಿವು ಇಂಗಿಸಿಕೊಳ್ಳುವ ಸಲುವಾಗಿ ಬಾಲಕ ಕೀಟನಾಶಕ ಸೇವಿಸಿದ್ದು ಸ್ಪಷ್ಟ ಎಂದು ಬಹಿರಂಗಪಡಿಸಿದೆ.
ಕಳೆದ ಡಿಸೆಂಬರ್ 29ರಂದು ಪೊಂಬತ್ತ ಎಂಬ ಗ್ರಾಮದಲ್ಲಿ ನಡೆದ ಈ ಘಟನೆ ಬಗೆಗಿನ ವಿಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದನ್ನು ಪರಿಗಣಿಸಿದ ಆಯೋಗ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. "ಹಲವು ದಿನಗಳಿಂದ ಮನೆಯಲ್ಲಿ ತಿನ್ನಲು ಆಹಾರ ಇರಲಿಲ್ಲ. ಆದ್ದರಿಂದ ಹಸಿವು ನೀಗಿಸಿಕೊಳ್ಳಲು ಕೈಗೆ ಸಿಕ್ಕಿದ್ದನ್ನು ಕುಡಿದಿದ್ದಾಗಿ ಬಾಲಕ ಹೇಳಿದ್ದಾನೆ" ಎಂದು ಆಯೋಗದ ಅಧ್ಯಕ್ಷ ರಾಘವೇಂದ್ರ ಶರ್ಮಾ ಪ್ರಕಟಿಸಿದ್ದಾರೆ.
ಬಾಲಕನ ಪೋಷಕರು ಕೂಲಿ ಕೆಲಸಕ್ಕಾಗಿ ರಾಜಸ್ಥಾನದ ಕೋಟಾಗೆ ತೆರಳಿದ್ದರು. ಕಳೆದ ನವೆಂಬರ್ನಲ್ಲಿ ಈ ಕುಟುಂಬ ಕೊನೆಯದಾಗಿ ಪಡಿತರ ಪಡೆದಿತ್ತು ಎಂದು ವಿವರಿಸಿದ್ದಾರೆ. ಬಾಲಕ ವಿಷ ಕುಡಿದದ್ದು ತಿಳಿದ ಬಳಿಕ ಗ್ರಾಮಸ್ಥರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದರು. "ಮನೆಯಲ್ಲಿ ನಿಜಕ್ಕೂ ಆಹಾರಧಾನ್ಯ ಇರಲಿಲ್ಲ. ಆದರೆ ಅಧಿಕಾರಿಗಳು ಮನೆಯಲ್ಲಿ ಧಾನ್ಯಗಳು ಇಡುವ ಮೂಲಕ ಪರಿಸ್ಥಿತಿ ಮರೆಮಾಚುವ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಕೋಟಾದಿಂದ ಮರಳಿದ ಬಾಲಕನ ಚಿಕ್ಕಪ್ಪ ನಾನೂರಾಂ ದೂರಿದ್ದಾರೆ.