ಬಿಜೆಪಿಯನ್ನು ಸಮಾಧಿ ಮಾಡುತ್ತೇವೆ: ಶಿವಸೇನೆ ನಾಯಕ ಕದಮ್ ಬೆದರಿಕೆ

ಮುಂಬೈ, ಜ.9: ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ ಚುನಾವಣಾ ಪೂರ್ವ ಮೈತ್ರಿ ಪಾಲಿಸದಿದ್ದರೆ ಮೈತ್ರಿ ಕಡಿದು ಕೊಳ್ಳಲಾಗುವುದು ಎಂದು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಶಿವಸೇನೆಯ ಹಿರಿಯ ನಾಯಕ ರಾಮದಾಸ್ ಕದಮ್, ಬಿಜೆಪಿಯನ್ನು ನೆಲ ಸಮಾಧಿ ಮಾಡುತ್ತೇವೆ ಎಂದು ಬೆದರಿಸಿದ್ದಾರೆ.
ಕದಮ್ ಪ್ರತಿನಿಧಿಸುವ ಶಿವಸೇನೆ ಪ್ರಸ್ತುತ ಬಿಜೆಪಿಯೊಂದಿಗೆ ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿ ಮೈತ್ರಿ ಮಾಡಿಕೊಂಡಿದೆ. ಸೇನೆ 2014ರ ಅಸೆಂಬ್ಲಿ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ 63 ಸ್ಥಾನಗಳನ್ನು ಗೆದ್ದುಕೊಂಡಿದೆ.
‘‘ಅದು(ಬಿಜೆಪಿ)ಈಗಾಗಲೇ ಐದು ರಾಜ್ಯಗಳಲ್ಲಿ ಹೀನಾಯವಾಗಿ ಸೋತಿದೆ.ಮಹಾರಾಷ್ಟ್ರಕ್ಕೆ ಬಂದು ನಮಗೆ ಬೆದರಿಕೆ ಹಾಕಬೇಡಿ. ನಾವು ನಿಮ್ಮನ್ನು ಸಮಾಧಿ ಮಾಡುತ್ತೇವೆ. ಮೋದಿ ಅಲೆಯ ನಡುವೆಯೂ ನಾವು 2014ರಲ್ಲಿ 63 ಅಸೆಂಬ್ಲಿ ಸೀಟುಗಳನ್ನು ಗೆದ್ದಿರುವುದನ್ನು ಮರೆಯಬೇಡಿ’’ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಹಾರಾಷ್ಟ್ರ ಸರಕಾರದ ಸಚಿವರಾಗಿರುವ ಕದಮ್ ಹೇಳಿದ್ದಾರೆ.
Next Story