ಗುಜರಾತ್ ಎನ್ಕೌಂಟರ್ ಪ್ರಕರಣ: ಬೇಡಿ ಸಮಿತಿಯ ವರದಿಯನ್ನು ಅರ್ಜಿದಾರರಿಗೂ ನೀಡಿ
ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ಹೊಸದಿಲ್ಲಿ, ಜ.9: ಗುಜರಾತ್ನಲ್ಲಿ 2002ರಿಂದ 2007ರವರೆಗೆ ನಡೆದಿದೆ ಎನ್ನಲಾಗಿರುವ ನಕಲಿ ಎನ್ಕೌಂಟರ್ ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಎಚ್ಎಸ್ ಬೇಡಿ ಸಮಿತಿಯ ವರದಿಯ ಪ್ರತಿಯನ್ನು ಅರ್ಜಿದಾರರಿಗೂ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಪಾಲಿಸಲಾಗುತ್ತಿದ್ದ ಪದ್ದತಿಗೆ ವಿರುದ್ಧವಾಗಿ, ತನಿಖಾ ಸಮಿತಿಯ ಇತರ ಸದಸ್ಯರ ಅಭಿಪ್ರಾಯಗಳನ್ನು ಕೇಳದೆ ಎಚ್.ಎಸ್ ಬೇಡಿ ಅಂತಿಮ ವರದಿ ಸಲ್ಲಿಸಿದ್ದಾರೆ. ಆದ್ದರಿಂದ ಈ ವರದಿಯ ಪ್ರತಿಯನ್ನು ಅರ್ಜಿದಾರರಿಗೆ ನೀಡಬಾರದು ಎಂದು ರಾಜ್ಯ ಸರಕಾರದ ಪ್ರತಿನಿಧಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಅಂತಿಮ ವರದಿ ಸಲ್ಲಿಸುವ ಮೊದಲು ಸಮಿತಿಯ ಇತರ ಸದಸ್ಯರ ಅಭಿಪ್ರಾಯವನ್ನು ಕೇಳಲಾಗಿದೆಯೇ ಎಂಬ ಬಗ್ಗೆ ತಕ್ಷಣ ತಿಳಿಸುವಂತೆ ಈ ಹಿಂದೆ ನ್ಯಾಯಪೀಠವು ನ್ಯಾ. ಎಚ್ಎಸ್ ಬೇಡಿಗೆ ತಿಳಿಸಿತ್ತು.
ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ 22 ನಕಲಿ ಎನ್ಕೌಂಟರ್ ಪ್ರಕರಣ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಪತ್ರಕರ್ತ ಬಿ.ಜಿ. ವರ್ಗಿಸ್ ಮತ್ತು ಸಾಹಿತಿ ಜಾವೇದ್ ಅಖ್ತರ್ ಸುಪ್ರಿಂಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ, 2002ರಿಂದ 2007ರವರೆಗೆ ಗುಜರಾತ್ನಲ್ಲಿ ನಡೆದಿದ್ದ ಎನ್ಕೌಂಟರ್ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ಬೇಡಿ ಸಮಿತಿಯನ್ನು ರಚಿಸಲಾಗಿದೆ.