ವಾಯುಪಡೆಯಿಂದ 14 ಸಾವಿರ ಕೋಟಿ ರೂ. ಬಾಕಿ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಎಚ್‌ಎಎಲ್

ಬೆಂಗಳೂರು, ಜ.9: ವಾಯುಪಡೆ 14 ಸಾವಿರ ಕೋಟಿ ರೂ. ಪಾವತಿ ಬಾಕಿ ಇರಿಸಿರುವುದರಿಂದ ವಿಮಾನ ಉತ್ಪಾದನಾ ಸಂಸ್ಥೆ ಹಿಂದುಸ್ತಾನ್ ಏರೋನಾಟಿಕ್ಸ್ ಲಿ. (ಎಚ್‌ಎಎಲ್) 80 ವರ್ಷದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ಇದೀಗ ಎಚ್‌ಎಎಲ್ ವೆಚ್ಚ ನಿಯಂತ್ರಣ ಕ್ರಮಗಳಿಗೆ ಮುಂದಾಗಿದ್ದು, ಅಧಿಕಾರಿಗಳ ಅನಗತ್ಯ ಪ್ರವಾಸಕ್ಕೆ ಕಡಿವಾಣ, ಗುತ್ತಿಗೆ ನೌಕರರ ಪ್ರಮಾಣದಲ್ಲಿ ಶೇ.20ರಷ್ಟು ಇಳಿಕೆ ಮುಂತಾದ ಕ್ರಮಗಳನ್ನು ಕೈಗೊಂಡಿದೆ. ಎಚ್‌ಎಎಲ್‌ನ ಪ್ರಮುಖ ಗ್ರಾಹಕನಾಗಿರುವ ವಾಯುಪಡೆ ಸಾಮಾನ್ಯವಾಗಿ ಮೂರು ತಿಂಗಳೊಳಗೆ ಹಣವನ್ನು ಪಾವತಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾವತಿ ವಿಳಂಬವಾಗಿರುವುದರಿಂದ ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ನಿರ್ಮಾಣಕ್ಕೆ ಬಿಡಿ ಭಾಗಗಳನ್ನು ಖರೀದಿಸಲೂ ಹಣದ ಅಡಚಣೆ ಎದುರಾಗಿದೆ.
ಈ ವರ್ಷ ವಾಯುಪಡೆಗೆ ಐದು ತೇಜಸ್ ಲಘು ಯುದ್ಧವಿಮಾನವೂ ಸೇರಿದಂತೆ ಹಲವು ಯುದ್ಧವಿಮಾನಗಳನ್ನು ಪೂರೈಸಬೇಕಿದ್ದು, ಮಾರ್ಚ್ ಅಂತ್ಯಕ್ಕೆ ವಾಯುಪಡೆಯ ಬಾಕಿ ಮೊತ್ತ 20 ಸಾವಿರ ಕೋಟಿ ರೂ.ಗೆ ಹೆಚ್ಚಬಹುದು ಎಂದು ಎಚ್‌ಎಎಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದ ಎಚ್‌ಎಎಲ್ ಇತ್ತೀಚಿನ ದಿನಗಳಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ನೌಕರರಿಗೆ ವೇತನ ಪಾವತಿಸಲೂ ಸಮಸ್ಯೆಯಾಗಿದೆ. ಕಳೆದ ತಿಂಗಳು ಸಂಸ್ಥೆ 962 ಕೋಟಿ ರೂ. ಸಾಲವನ್ನು ಓವರ್ ಡ್ರಾಫ್ಟ್ ಮೂಲಕ ಪಡೆದುಕೊಂಡಿದೆ. ಅಲ್ಲದೆ ಸಂಸ್ಥೆಯಲ್ಲಿರುವ 11 ಸಾವಿರ ಗುತ್ತಿಗೆ ನೌಕರರಲ್ಲಿ ಶೇ.20 (2,200) ಮಂದಿಯನ್ನು ಕೈಬಿಡುವುದು, ತರಬೇತಿ, ವಿಚಾರಸಂಕಿರಣ ಇತ್ಯಾದಿಗಳಲ್ಲಿ ಭಾಗವಹಿಸದಂತೆ ಅಧಿಕಾರಿಗಳನ್ನು ನಿರ್ಬಂಧಿಸುವುದು ಮುಂತಾದ ಕ್ರಮಗಳ ಮೂಲಕ ವೆಚ್ಚ ನಿಯಂತ್ರಣಕ್ಕೆ ಮುಂದಾಗಿದೆ. ಕಳೆದ ಐದು ವರ್ಷಗಳಲ್ಲಿ ಸರಕಾರಕ್ಕೆ ಎಚ್‌ಎಎಲ್ ಎರಡು ಬಾರಿ ಡಿವಿಡೆಂಡ್ ರೂಪದಲ್ಲಿ 11,500 ಕೋಟಿ ರೂ. ಪಾವತಿಸಿದ್ದು, ಇದು ಕೂಡಾ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.