ಬಿಎಸ್‌ವೈ, ಶೆಟ್ಟರ್, ಆರ್.ಅಶೋಕ್ ವಿರುದ್ಧದ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್
ಜಮೀನು ಡಿನೋಟಿಫಿಕೇಷನ್ ಪ್ರಕರಣ

ಬೆಂಗಳೂರು, ಜ.9: ನಗರದ ಆರ್‌ಎಂವಿ ಬಡಾವಣೆ 2ನೆ ಹಂತದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಬಿಡಿಎ ವಶಪಡಿಸಿಕೊಂಡಿದ್ದ 14 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್‌ಗೆ ವಿರುದ್ಧ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
ಪ್ರಕರಣದ ಕುರಿತು ಮರು ತನಿಖೆ ನಡೆಸಲು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಉಪ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶಿಸುವಂತೆ ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಸಲ್ಲಿಸಿರುವ ಪಿಐಎಲ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತು.
ಬಿಡಿಎ ಪರ ವಕೀಲರು ಆಕ್ಷೇಪಣೆ ಸಲ್ಲಿಸಿ, ವಿವಾದಿತ ಜಮೀನನ್ನು ಆರ್. ಅಶೋಕ್ 2011ರಲ್ಲೇ ಬಿಡಿಎಗೆ ದಾನಪತ್ರ ಮಾಡಿಕೊಟ್ಟಿದ್ದು, ಸದ್ಯ ಜಮೀನು ಬಿಡಿಎ ವಶದಲ್ಲೇ ಇದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಇದನ್ನು ಪರಿಗಣಿಸಿದ ಪೀಠ, ಅರ್ಜಿದಾರರು ಆಕ್ಷೇಪಿಸಿದ್ದ ಭೂಮಿಯು ಈಗಾಗಲೇ ಬಿಡಿಎ ವಶದಲ್ಲಿದ್ದು, ಅರ್ಜಿಯ ಪಿಐಎಲ್ ವ್ಯಾಪ್ತಿ ಮುಗಿದಿದೆ. ಅಗತ್ಯವಿದ್ದಲ್ಲಿ ಅರ್ಜಿದಾರರು ಕಾನೂನಿಲ್ಲಿ ಲಭ್ಯವಿರುವ ಪರ್ಯಾಯ ಮಾರ್ಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.