ಮಧ್ಯಪ್ರದೇಶ 35 ರನ್‌ಗೆ ಆಲೌಟ್: ಆಂಧ್ರಕ್ಕೆ ಭರ್ಜರಿ ಜಯ

ಭೋಪಾಲ್, ಜ.9: ರಣಜಿ ಟ್ರೋಫಿಯಲ್ಲಿ ಬುಧವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ನಾಟಕೀಯ ಕುಸಿತ ಕಂಡು 35 ರನ್‌ಗೆ ಆಲೌಟಾಗಿದೆ. 307 ರನ್‌ಗಳ ಭರ್ಜರಿ ಜಯ ಸಾಧಿಸಿದ ಆಂಧ್ರ ನಾಕೌಟ್ ಹಂತಕ್ಕೇರುವ ಮಧ್ಯಪ್ರದೇಶ ಕನಸನ್ನು ಭಗ್ನಗೊಳಿಸಿದೆ. ಮಧ್ಯಪ್ರದೇಶ ಒಂದು ಹಂತದಲ್ಲಿ 35 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. ಮುಂದಿನ 23 ಎಸೆತಗಳಲ್ಲಿ ಒಂದೂ ರನ್ ಸೇರಿಸದೆ ಉಳಿದ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಗೌರವ್ ಯಾದವ್ ಗಾಯಗೊಂಡ ಕಾರಣ ಬ್ಯಾಟಿಂಗ್ ಮಾಡಲಿಲ್ಲ. ಮ.ಪ್ರ.ಪರ ಇಬ್ಬರು ದಾಂಡಿಗರಾದ ಆರ್ಯಮಾನ್ ಬಿರ್ಲಾ(12) ಹಾಗೂ ಯಶ್ ದುಬೆ(16) ಎರಡಂಕೆಯ ಸ್ಕೋರ್ ಗಳಿಸಿದ್ದರು. ಏಳು ದಾಂಡಿಗರು ಒಂದೂ ರನ್ ಗಳಿಸಲಿಲ್ಲ. ಶಶಿಕಾಂತ್ (18ಕ್ಕೆ 6) ಹಾಗೂ ವಿಜಯಕುಮಾರ್ (17ಕ್ಕೆ3) ಒಟ್ಟು 9 ವಿಕೆಟ್ ಪಡೆದು ಮಧ್ಯಪ್ರದೇಶದ ಬ್ಯಾಟಿಂಗ್ ಕುಸಿತಕ್ಕೆ ಕಾರಣರಾದರು. ಇದು ರಣಜಿ ಟ್ರೋಫಿಯ ಎರಡನೇ ಕನಿಷ್ಠ ಸ್ಕೋರಾಗಿದೆ. 2010-11ರಲ್ಲಿ ಹೈದರಾಬಾದ್ ತಂಡ ರಾಜಸ್ಥಾನದ ವಿರುದ್ಧ ಕೇವಲ 21 ರನ್‌ಗೆ ಆಲೌಟಾಗಿತ್ತು. ವಿಕೆಟ್‌ಕೀಪರ್-ನಾಯಕ ನಮನ್ ಓಜಾ(1)ವಿಕೆಟ್ ಪತನಗೊಳ್ಳುವುದ ರೊಂದಿಗೆ ಮ.ಪ್ರ.ದ ಬ್ಯಾಟಿಂಗ್ ಕುಸಿತ ಆರಂಭವಾಯಿತು. ಓಜಾ ಬಳಿಕ ಯಾವ ದಾಂಡಿಗನೂ ರನ್ ಗಳಿಸುವ ಗೋಜಿಗೆ ಹೋಗಲಿಲ್ಲ.ಸತತ ಎಸೆತಗಳಲ್ಲಿ ವೆಂಕಟೇಶ್ ಹಾಗೂ ಕಾರ್ತಿಕೇಯನ್ ವಿಕೆಟ್ ಪಡೆದ ಶಶಿಕಾಂತ್‌ಗೆ ಹ್ಯಾಟ್ರಿಕ್ ವಿಕೆಟ್ ಕೈತಪ್ಪಿತು. ಆಂಧ್ರದ ಮೊದಲ ಇನಿಂಗ್ಸ್ 132 ರನ್‌ಗೆ ಉತ್ತರವಾಗಿ ಮ.ಪ್ರ. 91 ರನ್ ಗಳಿಸಿತ್ತು. ಆಂಧ್ರ 2ನೇ ಇನಿಂಗ್ಸ್‌ನಲ್ಲಿ 301 ರನ್ ಗಳಿಸಿ ಮ.ಪ್ರದೇಶದ ಗೆಲುವಿಗೆ 343 ರನ್ ಗುರಿ ನೀಡಿತ್ತು.





