ಬಿಷನ್‌ಸಿಂಗ್ ಬೇಡಿ ದಾಖಲೆ ಮುರಿದ ಬಿಹಾರದ ಅಮನ್
ರಣಜಿ ಋತುವಿನಲ್ಲಿ ಗರಿಷ್ಠ ವಿಕೆಟ್ ಸಾಧನೆ

ಪಾಟ್ನಾ, ಜ.10: ಬಿಹಾರದ ಎಡಗೈ ಸ್ಪಿನ್ನರ್ ಅಶುತೋಷ್ ಅಮನ್ 44 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿದ್ದಾರೆ. ಬುಧವಾರ ನಡೆದ ರಣಜಿ ಟ್ರೋಫಿಯಲ್ಲಿ 65ನೇ ವಿಕೆಟ್ ಕಬಳಿಸುವ ಮೂಲಕ ರಣಜಿ ಋತುವೊಂದರಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದು ಬಿಷನ್‌ಸಿಂಗ್ ಬೇಡಿ ಅವರ ದಾಖಲೆಯನ್ನು ನುಚ್ಚುನೂರು ಮಾಡಿದ್ದಾರೆ. ಮಣಿಪುರ ವಿರುದ್ಧದ ಪಂದ್ಯದಲ್ಲಿ ಬಿಹಾರದ ಪರ ಆಡುತ್ತಿರುವ ಅಮನ್ ಮಣಿಪುರದ ಸಗತ್ಪಾಮ್ ಸಿಂಗ್ ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸುವ ಮೂಲಕ 1974-75ರ ರಣಜಿ ಋತುವಿನಲ್ಲಿ ಭಾರತ ತಂಡದ ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ ನಿರ್ಮಿಸಿದ್ದ ದಾಖಲೆಯನ್ನು (64 ವಿಕೆಟ್) ಮುರಿದರು.
ಭಾರತದ ವಾಯುಸೇನೆಯಲ್ಲಿ ಉದ್ಯೋಗಿಯಾಗಿರುವ ಅಮನ್, ಮಣಿಪುರ ವಿರುದ್ಧದ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 71 ರನ್ ನೀಡಿ 7 ವಿಕೆಟ್ ಪಡೆಯುವ ಮೂಲಕ ಈ ಋತುವಿನಲ್ಲಿ 14 ಇನಿಂಗ್ಸ್ ಗಳಿಂದ 6.48 ಸರಾಸರಿಯಲ್ಲಿ 68 ವಿಕೆಟ್‌ಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಬಿಹಾರ ತಂಡ ಮಣಿಪುರವನ್ನು 3 ವಿಕೆಟ್‌ಗಳಿಂದ ಮಣಿಸಿತು.
Next Story





