ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧ: ಮುಹಮ್ಮದ್ ಸಿರಾಜ್
ಹೊಸದಿಲ್ಲಿ, ಜ.9: ‘‘ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸಕ್ಕೆ ಟೀಮ್ ಇಂಡಿಯಾದಲ್ಲಿ ಆಯ್ಕೆಯಾದ ವಿಷಯ ಕೇಳಿ ತುಂಬಾ ಸಂತೋಷವಾಗಿತ್ತು. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಫೋನ್ ಮುಖಾಂತರ ಭಾರತವನ್ನು ಪ್ರತಿನಿಧಿಸಲು ಆಸ್ಟ್ರೇಲಿಯಕ್ಕೆ ತೆರಳಲು ಆಯ್ಕೆಯಾಗಿದ್ದೇನೆಂದು ಗೊತ್ತಾದಾಗ ಜೋರಾಗಿ ಕೂಗಿದ್ದೆ. ಬಳಿಕ ನನ್ನ ಹೆತ್ತವರನ್ನು ಆಲಿಂಗಿಸಿಕೊಂಡೆ. ಏಕದಿನ ಕ್ರಿಕೆಟ್‌ಗೆ ಮೊದಲ ಬಾರಿ ಆಡುವ ಅವಕಾಶ ಲಭಿಸಿದ್ದಕ್ಕೆ ತುಂಬಾ ಖುಷಿಯಾಗಿದೆ’’ ಎಂದು ಭಾರತದ ಯುವ ವೇಗಿ ಮುಹಮ್ಮದ್ ಸಿರಾಜ್ ಹೇಳಿದ್ದಾರೆ. ಭಾರತದ ಸ್ಟಾರ್ ಆಟಗಾರ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಸಿರಾಜ್‌ರನ್ನು ಬಿಸಿಸಿಐ ಆಯ್ಕೆ ಮಾಡಿತ್ತು. ‘‘ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಜವಾಬ್ದಾರಿವಹಿಸಿಕೊಳ್ಳಲು ನಾನು ಸಿದ್ದನಿದ್ದೇನೆ. ವೇಗದ ಬೌಲಿಂಗ್ ವಿಭಾಗ ನಿಭಾಯಿಸಲು ತಯಾರಿದ್ದೇನೆ. ಅವರು(ಬುಮ್ರಾ) ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ನಮ್ಮ ಸ್ಟಾರ್ ಬೌಲರ್. ಅವರ ಅನುಪಸ್ಥಿತಿಯಲ್ಲಿ ನನ್ನ ಮೇಲೆ ಬಹಳಷ್ಟು ನಿರೀಕ್ಷೆ ಇಡಲಾಗಿದೆ. ನಾನು ಸರಣಿಗೆ ಸಿದ್ಧವಾಗಿದ್ದೇನೆ’’ ಎಂದು ಆತ್ಮವಿಶ್ವಾಸದ ಮಾತನಾಡಿದರು. ಹೈದರಾಬಾದ್ ವೇಗಿ ಸಿರಾಜ್ ಈ ತನಕ 3 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.





