ಬಿಡಿಎ ಅಧ್ಯಕ್ಷಗಿರಿ ಮುಳ್ಳಿನ ಹಾಸಿಗೆ ಇದ್ದಂತೆ: ಎಸ್.ಟಿ.ಸೋಮಶೇಖರ್

ಬೆಂಗಳೂರು, ಜ.10: ಬಿಡಿಎ ಅಧ್ಯಕ್ಷಗಿರಿ ಮುಳ್ಳಿನ ಹಾಸಿಗೆ ಇದ್ದಂತೆ. ನಾನು ಯಾವುದೇ ಅಧಿಕಾರಕ್ಕೆ ಜೋತು ಬಿದ್ದಿಲ್ಲ. ಕಾಂಗ್ರೆಸ್ ಹೈಕಮಾಂಡ್ ನನ್ನನ್ನು ಗುರುತಿಸಿ ಅಧ್ಯಕ್ಷ ಸ್ಥಾನ ನೀಡಿದೆ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಗುರುವಾರ ನಗರದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೇಂದ್ರ ಕಚೇರಿಯಲ್ಲಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನಾನು ಯಾವುದೇ ಅಧಿಕಾರಕ್ಕೆ ಜೋತು ಬಿದ್ದಿಲ್ಲ. ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಿಡಿಎ ಸದಸ್ಯನಾಗಿದ್ದೆ. ಇಲ್ಲಿನ ಸ್ಥಿತಿಗತಿಗಳು ಗೊತ್ತಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನ ನೀಡಿದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಶಾಸಕಾಂಗದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಎಲ್ಲರಿಗೂ ಋಣಿಯಾಗಿದ್ದೇನೆ ಎಂದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಆರ್ಥಿಕ ಸಮಸ್ಯೆ ಇಲ್ಲ. ಆದರೆ, ಕೆಲವು ಸಮಸ್ಯೆಗಳಿರುವುದು ಗಮನಿಸಿದ್ದೇನೆ. ನನ್ನ ಕ್ಷೇತ್ರ ವ್ಯಾಪ್ತಿಗೆ ಬರುವ ಕೆಂಪೇಗೌಡ, ವಿಶ್ವೇಶ್ವರಯ್ಯ ಬಡಾವಣೆ ಸೇರಿದಂತೆ ನಗರದ ಎಲ್ಲಾ ಬಡಾವಣೆಗಳ ಸಮಸ್ಯೆಯನ್ನು ಹಂತ ಹಂತವಾಗಿ ನಿವಾರಿಸುತ್ತೇನೆ. ಬಿಡಿಎಗೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸುತ್ತೇನೆ ಎಂದರು.
ಅಲ್ಲದೆ, ಶೀಘ್ರವೇ ಸ್ಟೀಲ್‌ಬ್ರಿಡ್ಜ್ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಈ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಲಹೆ -ಸೂಚನೆಗಳನ್ನು ನೀಡಿದ್ದಾರೆ. ಅವರ ಸಲಹೆ ಮೇರೆಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.
ಸುದ್ದಿಗಾರರೊಂದಿಗೆ ಮಾತನಾಡದ ಡಿಸಿಎಂ:ಸಮ್ಮಿಶ್ರ ಸರಕಾರದಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಪ್ರಸ್ತುತ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಶಾಸಕ ಎಸ್.ಟಿ.ಸೋಮಶೇಖರ್ ಆಯ್ಕೆಯಾದ ಹಿನ್ನೆಲೆ, 11.45ಕ್ಕೆ ಬಿಡಿಎ ಕೇಂದ್ರ ಕಚೇರಿಗೆ ಬಂದು ಅಧಿಕಾರ ಹಸ್ತಾಂತರಿಸಿದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಹೊರ ಹೋಗುವ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಮಾಧ್ಯಮದ ಜೊತೆ ಮಾತನಾಡಲು ಕರೆದರೂ, ಹಾಗೇ ಹೊರ ನಡೆದರು.
ನಾನು ಬಿಡಿಎ ಅಧ್ಯಕ್ಷನಾದ ಬಗ್ಗೆ ಡಾ.ಜಿ.ಪರಮೇಶ್ವರ್ ಅವರಿಗೆ ಬೇಜಾರಿಲ್ಲ. ಕಾರ್ಯಕ್ರಮಗಳು ಬಹಳ ಇರುವುದರಿಂದ ಮಾಧ್ಯಮದವರ ಜೊತೆ ಮಾತನಾಡಲು ಆಗಿಲ್ಲ. ಬಿಡಿಎದಲ್ಲಿ ಸಂಪನ್ಮೂಲ ಕ್ರೋಡೀಕರಣ ಸೇರಿದಂತೆ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಟಿ. ಸೋಮಶೇಖರ್ ಅಭಿಪ್ರಾಯಪಟ್ಟರು.







