ನಾಳೆ ಅತ್ತಿಬೆಲೆ ಬಂದ್: ವಾಟಾಳ್ ನಾಗರಾಜ್

ಬೆಂಗಳೂರು, ಜ.10: ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ಸರಕಾರದ ವಿರುದ್ಧ 12ರಂದು ಬೆಳಗ್ಗೆ 11.30ಕ್ಕೆ ತಮಿಳುನಾಡಿನ ಗಡಿಭಾಗ ಅತ್ತಿಬೆಲೆ ಬಂದ್ ಮಾಡಲಾಗುವುದು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ತಮಿಳುನಾಡು ಸರಕಾರ ಹಾಗೂ ಅಲ್ಲಿನ ಜನರು ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಆದರೂ ಕ್ಯಾತೆ ತೆಗೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ತಮಿಳುನಾಡು ಸರಕಾರವಾಗಲಿ, ಅಲ್ಲಿನ ಮುಖಂಡರಾಗಲಿ ಈ ಯೋಜನೆಗೆ ಅಡ್ಡಿಪಡಿಸಬಾರದು. ರಾಜ್ಯ ಸರಕಾರ ಕೂಡಲೇ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು. ನೀಲನಕ್ಷೆ ತಯಾರಿಸಬೇಕು. ಯೋಜನೆಗೆ ಎಷ್ಟು ಹಣ ವೆಚ್ಚವಾಗುತ್ತದೆ ಎಂಬುದನ್ನು ನಿಗದಿಪಡಿಸಬೇಕು. ಎಷ್ಟು ವರ್ಷದಲ್ಲಿ ಪೂರ್ಣಗೊಳ್ಳುತ್ತದೆ ಎಂಬುದನ್ನು ಪ್ರಕಟಿಸಬೇಕು ಹಾಗೂ ಇದಕ್ಕಾಗಿ ವಿಶೇಷ ಕಾರ್ಯತಂತ್ರ ರೂಪಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರಕಾರ ಈ ಯೋಜನೆ ಅನುಷ್ಠಾನದ ವಿಷಯದಲ್ಲಿ ಮೃದು ಧೋರಣೆ ಅನುಸರಿಸುತ್ತಿದೆ. ಮೇಕೆದಾಟು ಜಲಾಶಯದಿಂದ ವಿದ್ಯುಚ್ಛಕ್ತಿ ತಯಾರಿಕೆ, ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಸಮುದ್ರಕ್ಕೆ ಹೋಗುವ ಹೆಚ್ಚುವರಿ ನೀರನ್ನು ತಡೆದು ಮೇಕೆದಾಟು ಯೋಜನೆ ಆರಂಭಿಸಲಾಗುತ್ತದೆ. ಇದರಿಂದ ತಮಿಳುನಾಡಿಗೆ ಯಾವುದೇ ತೊಂದರೆ ಆಗುವುದಿಲ್ಲ. ಇದನ್ನು ಅಲ್ಲಿನ ಸರಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.
ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಕ್ಯಾತೆ ತೆಗೆದಿದ್ದು, ಇದಕ್ಕೆ ನಾವು ಬಗ್ಗುವುದಿಲ್ಲ. ಅವರಷ್ಟೇ ಅಲ್ಲ ನಾವೂ ಹೋರಾಟ ಮಾಡುತ್ತೇವೆ. ರಾಜ್ಯ ಸರಕಾರ ಕೂಡಲೇ ಯೋಜನೆ ಶಂಕುಸ್ಥಾಪನೆ ಮಾಡಬೇಕು ಎಂದರು.
ಹದಿನೈದು ದಿನಗಳೊಳಗಾಗಿ ಜಲಸಂಪನ್ಮೂಲ ಸಚಿವರು ಕ್ರಮ ವಹಿಸದಿದ್ದರೆ ಸಚಿವರ ಮನೆ ಮುಂದೆ ಧರಣಿ ನಡೆಸಿ, ಮೇಕೆದಾಟಿಗೆ ಜಲಿಕಲ್ಲು, ಮಣ್ಣು, ಸಿಮೆಂಟ್ ತೆಗೆದುಕೊಂಡು ಹೋಗಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು.
-ವಾಟಾಳ್ ನಾಗರಾಜ್, ಕನ್ನಡ ಒಕ್ಕೂಟದ ಅಧ್ಯಕ್ಷ







