ತುಂಬೆ ಅಣೆಕಟ್ಟು ಪರಿಸರದಲ್ಲಿ ವಿದೇಶಿ ಪಕ್ಷಿಗಳ ಕಲರವ!

ಮಂಗಳೂರು, ಜ 10: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ನದಿಗೆ ತುಂಬೆ ಬಳಿಯಲ್ಲಿ ಕಟ್ಟಲಾದ ಕಿಂಡಿ ಅಣೆಕಟ್ಟು ಪರಿಸರದಲ್ಲಿ ವಿದೇಶಿ ಪಕ್ಷಿಗಳು ಬೀಡುಬಿಟ್ಟಿದ್ದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ಸಾಮಾನ್ಯವಾಗಿ ನದಿ ಹಾಗೂ ತೊರೆಗಳಲ್ಲಿ ಕಾಣಸಿಗುವ ಬಿಳಿ ಕೊಕ್ಕರೆ ಮತ್ತು ನೀರು ಕಾಗೆಗಳ ಜೊತೆಯಲ್ಲಿ ರೆಕ್ಕೆಯಲ್ಲಿ ಕಪ್ಪು ಬಿಳುಪು ಬಣ್ಣ ಹೊಂದಿರುವ ಆಫ್ರಿಕಾ ಮೂಲದ ಪಿಡ್ ಕಿಂಗ್ ಫಿಶರ್, ನೀಳ ಕಾಲುಗಳು ಮತ್ತು ಕೊಕ್ಕು ಹೊಂದಿರುವ ಅಮೆರಿಕಾ ಮೂಲದ ಹೆರನ್ ಹಾಗೂ ರೆಕ್ಕೆಯಲ್ಲಿ ಕಪ್ಪು ಬಿಳುಪು ಬಣ್ಣ ಮತ್ತು ಕೊಕ್ಕಿನಲ್ಲಿ ಹಳದಿ ಮಿಶ್ರಿತ ಬಿಳುಪು ಬಣ್ಣ ಹೊಂದಿರುವ ಪೂರ್ವ ಏಶ್ಯಾ ಮೂಲದ ಕಾರ್ಮೊರೆಂಟ್ ಪಕ್ಷಿಗಳನ್ನು ಇಲ್ಲಿ ಕಾಣಬಹುದು.
ಕೆಲವೊಮ್ಮೆ ಅಪರೂಪದ ಬಣ್ಣ ಬಣ್ಣದ ಹಕ್ಕಿಗಳೂ ಇಲ್ಲಿಗೆ ವಲಸೆ ಬರುತ್ತವೆ. ದಿನ ನಿತ್ಯ ನೋಡುವಂತಹ ಕೊಕ್ಕರೆ, ನಿರು ಕಾಗೆಗಳ ಜೊತೆಯಲ್ಲಿ ಬೇರೆ ಹಕ್ಕಿಗಳನ್ನೂ ನಾವು ಗಮನಿಸುತ್ತಿದ್ದೇವೆ. ಆ ಹಕ್ಕಿಗಳ ಹೆಸರು ನಮಗೆ ಗೊತ್ತಿಲ್ಲ. ಈ ಹಕ್ಕಿಗಳು ಎಲ್ಲಾ ಸಮಯದಲ್ಲಿ ನಮಗೆ ಇಲ್ಲಿ ಕಾಣಲು ಸಿಗುವುದಿಲ್ಲ ಎಂದು ಅಣೆಕಟ್ಟಿನ ಸೆಕ್ಯುರಿಟ್ ಗಾರ್ಡ್ ಗಳು ಹೇಳುತ್ತಾರೆ.

ನಗರದ ಜನರಿಗೆ ಕುಡಿಯುವ ನೀರಿಗಾಗಿ ಮೂರು ವರುಷದ ಹಿಂದೆ ಈ ಅಣೆಕಟ್ಟನ್ನು ಮಹಾ ನಗರ ಪಾಲಿಕೆಯಿಂದ ನಿರ್ಮಿಸಲಾಗಿತ್ತು. ವರ್ಷದುದ್ದಕ್ಕೂ ಇಲ್ಲಿ ನೀರು ಶೇಖರಣೆ ಮಾಡಲಾಗುತ್ತಿದೆ. ಇದರಿಂದ ಸ್ಥಳೀಯ ಕೃಷಿ ಭೂಮಿಗೂ ಅನುಕೂಲವಾಗಿದೆ. ವಿದೇಶಗಳಿಂದ ವಲಸೆ ಬಂದಿರುವ ಹಕ್ಕಿಗಳು ಅಣೆಕಟ್ಟು ಆಸುಪಾಸಿನ ಹೊಲ ಗದ್ದೆಗಳಲ್ಲಿರುವ ಹುಳ ಹುಪ್ಪಟೆಗಳನ್ನು ತಿನ್ನುತ್ತಾ ಬದುಕು ಸಾಗಿಸುತ್ತಿವೆ. ಕೃಷಿಗೆ ತೊಂದರೆ ನೀಡುತ್ತಿದ್ದ ಹುಳಗಳಿಂದ ಬೇಸತ್ತ ರೈತರಿಗೂ ಈ ಹಕ್ಕಿಗಳಿಂದ ಉಪಯೋಗವಾಗಿದೆ ಎನ್ನುತ್ತಾರೆ ಸ್ಥಳೀಯ ರೈತರು.
ಪೊಟೊ: ಸುಹೈಲ್







