ವಿದ್ಯಾರ್ಥಿಗಳಿಗೆ ವ್ಯವಹಾರಿಕ ಜ್ಞಾನವೂ ಅಗತ್ಯ: ರಾಜಶೇಖರ್

ಚಿಕ್ಕಮಗಳೂರು, ಜ.10: ವಿದ್ಯಾರ್ಥಿಗಳು ತಮ್ಮ ಬದುಕು ರೂಪಿಸಿಕೊಳ್ಳಲು ವಿದ್ಯಾಭ್ಯಾಸದ ಜೊತೆಗೆ ವ್ಯವಹಾರ ಜ್ಞಾನವನ್ನು ಕಲಿಯಬೇಕೆಂದು ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು.
ಗುರುವಾರ ಜೆ.ವಿ.ಎಸ್ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕಲೆ, ಸಾಹಿತ್ಯ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತ್ಯಗತ್ಯ. ಆದರೆ ಜೀವನದಲ್ಲಿ ಗುರಿ ಸಾಧನೆ ಹಾಗೂ ಬದುಕು ರೂಪಿಸಿಕೊಳ್ಳಲು ವ್ಯವಹಾರ ಜ್ಞಾನವನ್ನು ಕಲಿತಲ್ಲಿ ಜೀವನದ ಗುರಿ ಮುಟ್ಟಲು ಸಾಧ್ಯ ಎಂದ ಅವರು, ಶಾಲಾ ವತಿಯಿಂದ ಮಕ್ಕಳ ಸಂತೆ ಆಯೋಜನೆ ಮಾಡಿ ಹಣ ಕಾಸಿನ ವ್ಯವಹಾರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಲಾಗಿದೆ. ಜನರ ಜೊತಗೆ ಯಾವ ರೀತಿ ವ್ಯಾಪಾರ, ವಹಿವಾಟು ಮಾಡಬಹುದು ಮತ್ತು ಸಾರ್ವಜನಿಕರ ಜೊತೆ ಹೇಗೆ ವ್ಯವಹರಿಸಬೇಕೆಂಬ ವಿಶೇಷ ಜ್ಞಾನವನ್ನು ವಿದ್ಯಾರ್ಥಿಗಳು ಕಲಿತಂತಾಗುತ್ತದೆ ಎಂದರು.
ವಿದ್ಯಾರ್ಥಿಗಳು ಸ್ವಚ್ಛತೆ ಕಾಪಾಡುವುದರ ಜೊತೆಗೆ ಪ್ಲಾಸ್ಟಿಕ್ ಚೀಲಗಳ ಬಳಕೆ ತಡೆಗೆ ಆಸ್ಥೆ ವಹಿಸಬೇಕು. ಸಂತೆಯಲ್ಲಿ ವಿವಿಧ ರೀತಿಯ ಸಾಮಗ್ರಿ ಕೊಂಡಿಕೊಳ್ಳಲು ಮನೆಯಿಂದಲೇ ಬ್ಯಾಗುಗಳನ್ನು ತೆಗೆದುಕೊಂಡು ಹೋಗಬೇಕು. ಪರಿಸರ ಸಂರಕ್ಷಿಸಲು ಶಾಲಾ ಕಾಲೇಜು ವಿದ್ಯಾರ್ಥಿಗಳು ಪರಿಸರವನ್ನು ಕಾಪಾಡುವುದರ ಜೊತೆಗೆ ಪ್ರತಿಯೋಬ್ಬರೂ ಸಸಿಗಳನ್ನು ನೆಡಲು ಮುದೆ ಬರಬೇಕೆಂದರು.
ಶಾಲಾ ಪ್ರಿನ್ಸಿಪಾಲ್ ಕ್ಲಿಸ್ಟೋಫರ್ ಕೊಟ್ಯಾನ್ ಮಾತನಾಡಿ, ಶಾಲಾ ಮಕ್ಕಳು ಶಾಲೆಯಲ್ಲಿ ಏರ್ಪಡಿಸುವ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಪರಿಪೂರ್ಣವಾಗಿ ಪಠ್ಯೇತರ ವಿಷಯದ ಬಗ್ಗೆ ಅರಿವು ಪಡೆಯಲು ಸಾಧ್ಯ. ಜೊತೆಗೆ ವ್ಯವಹಾರ ಜ್ಞಾನವನ್ನು ಕಲಿತು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಮಕ್ಕಳ ಸಂತೆಯಲ್ಲಿ ಭಾಗವಹಿಸಿದ್ದ ಎಸೆಸೆಲ್ಸಿ ವಿದ್ಯಾರ್ಥಿ ಫೈಸನ್ ಮಾತನಾಡಿ, ವಿದ್ಯಾಭ್ಯಾಸ ಮಾಡಿ ಕೆಲಸ ಸಿಗದಿದ್ದರೆ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಸ್ವಂತ ಉದ್ಯೋಗ ಪ್ರಾರಂಭಿಸಿ ಜೀವನ ನೆಡೆಸಲು ಈ ಕಾರ್ಯಕ್ರಮ ಅತಿಮುಖ್ಯವಾಗಿದೆ. ನಮ್ಮ ತಂದೆ ತಾಯಿಗಳು ಹಣಕ್ಕಾಗಿ ಎಷ್ಟು ಕಷ್ಟ ಪಡುತ್ತಾರೆ ಎಂಬುವುದರ ಬಗ್ಗೆ ಅರಿವು ಈ ಕಾರ್ಯಕ್ರಮದ ಮೂಲಕ ನಮಗಾಗಿದೆ ಎಂದರು.
7ನೇ ತರಗವಿ ವಿದ್ಯಾರ್ಥಿ ಅನುಷಾ ಮತ್ತು ಪ್ರೇರಣಾ ಮಾತನಾಡಿ, ಶಾಲೆಯಲ್ಲಿ ಪ್ರತೀ ವರ್ಷ ಮಕ್ಕಳ ಸಂತೆ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಾರೆ. ನಾವು ಸಹ ಭಾಗವಹಿಸಿ ಸಂತೆಯಲ್ಲಿ ಸಿಗುವ ತರಕಾರಿ ಹಣ್ಣುಗಳನ್ನು ತರುವುದರ ಜೊತೆಗೆ ತಂದೆ ತಾಯಿಗಳ ಸಹಕಾರದೊಂದಿಗೆ ಮನೆಯಲ್ಲಿಯೆ ತಯಾರಿಸಬಹುದಾದ ಸಿಹಿ ತಿಂಡಿಗಳನ್ನು ತಂದು ವ್ಯಾಪಾರ ಮಾಡುವುದು ಅತ್ಯಂತ ಸಂತೋಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲೆ ತೇಜಸ್ವಿನಿ, ಮುಖ್ಯ ಶಿಕ್ಷಕಿಯರಾದ ಪ್ರಮೀಳಾ, ಶಾಂತಾ, ಸಿಇಒ ಕುಳ್ಳೇಗೌಡ, ಸಂಘದ ವ್ಯವಸ್ಥಾಪಕ ರಾಜು, ಶಾಲಾ ಶಿಕ್ಷಕ ಶಂಕರೆಗೌಡ ಉಪಸ್ಥಿತರಿದ್ದರು.







