ಮೇರಿ ಕಿರೀಟಕ್ಕೆ ಮತ್ತೊಂದು ಗರಿ
ವಿಶ್ವ ಮಹಿಳಾ ಬಾಕ್ಸಿಂಗ್‌ನಲ್ಲಿ ನಂ.1 ಸ್ಥಾನ

ಹೊಸದಿಲ್ಲಿ, ಜ.10: ವಿಶ್ವ ಪ್ರಸಿದ್ಧ ಭಾರತದ ಬಾಕ್ಸಿಂಗ್ ತಾರೆ ಮೇರಿ ಕೋಮ್ ಹೊಸ ಎತ್ತರಕ್ಕೆ ಏರಿದ್ದಾರೆ. ದಾಖಲೆಯ 6ನೇ ಬಾರಿ ಗೆದ್ದಿರುವ ವಿಶ್ವ ಚಾಂಪಿಯನ್ ಪ್ರಶಸ್ತಿ ಅವರನ್ನು ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್‌ನ(ಎಐಬಿಎ) ಮಹಿಳಾ ರ್ಯಾಂಕಿಂಗ್‌ನಲ್ಲಿ ವಿಶ್ವ ನಂ.1ಸ್ಥಾನಕ್ಕೇರಿಸಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ದಿಲ್ಲಿಯಲ್ಲಿ ನಡೆದ ಬಾಕ್ಸಿಂಗ್‌ನ 48 ಕೆ.ಜಿ. ವಿಭಾಗದಲ್ಲಿ ಬಂಗಾರದ ಪದಕ ಗೆದ್ದಿರುವ ಮೂರು ಮಕ್ಕಳ ತಾಯಿ ಮಣಿಪುರದ ಮೇರಿ, ಯಶಸ್ವಿ ಬಾಕ್ಸರ್ ಎನಿಸಿಕೊಂಡಿದ್ದಾರೆ.
ಸದ್ಯ ಎಐಬಿಎ ಪ್ರಕಟಿಸಿರುವ ರ್ಯಾಂಕಿಂಗ್‌ನಲ್ಲಿ 1,700 ಅಂಕಗಳನ್ನು ಗಳಿಸಿರುವ ಮೇರಿ ತೂಕ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 36 ವರ್ಷದ ಮೇರಿ 2020ರ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ 51 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಯಾಕೆಂದರೆ 48 ಕೆ.ಜಿ. ವಿಭಾಗಕ್ಕೆ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಅವಕಾಶ ಇಲ್ಲ.
51 ಕೆ.ಜಿ. ವಿಭಾಗದಲ್ಲಿ ಪಿಂಕಿ ಜಾಂಗ್ರಾ 8ನೇ ಸ್ಥಾನದಲ್ಲಿದ್ದಾರೆ, ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಮನೀಷಾ ವೌನ್ 54 ಕೆ.ಜಿ ವಿಭಾಗದಲ್ಲಿ 8ನೇ ಸ್ಥಾನದಲ್ಲಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಾಜಿ ಬೆಳ್ಳಿ ಪದಕ ವಿಜೇತೆ ಸೋನಿಯಾ ಲಾಥರ್ 57 ಕೆ.ಜಿ. ವಿಭಾಗದಲ್ಲಿ 2ನೇ ಸ್ಥಾನ. 64 ಕೆ.ಜಿ. ವಿಭಾಗದಲ್ಲಿ ಸಿಮ್ರನ್‌ಜಿತ್ ಕೌರ್‌ಗೆ 4ನೇ ಸ್ಥಾನ. ಅದೇ ವಿಭಾಗದಲ್ಲಿ ಎಲ್.ಸರಿತಾದೇವಿಗೆ 16ನೇ ಸ್ಥಾನ. 69 ಕೆ.ಜಿ. ವಿಭಾಗದಲ್ಲಿ ಲವ್ಲಿನಾ ಬೊರ್ಗೊಹೈನ್‌ಗೆ 5ನೇ ಸ್ಥಾನವನ್ನು ನೂತನ ವಿಶ್ವ ರ್ಯಾಂಕಿಂಗ್‌ನಲ್ಲಿ ಪಡೆದಿದ್ದಾರೆ.







