ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ

ಕೊಪ್ಪ, ಜ.10: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಸರ್ಕಾರಿ ಶಾಲೆಗಳ 8ನೇ ತರಗತಿ ಮಕ್ಕಳಿಗಾಗಿ ಆಯೋಜಿಸಿರುವ ಕರ್ನಾಟಕ ದರ್ಶನ ಪ್ರವಾಸಕ್ಕೆ ಗುರುವಾರ ಪಟ್ಟಣದ ಪುರಭವನದ ಎದುರು ಚಾಲನೆ ನೀಡಲಾಯಿತು.
ಹಸಿರು ನಿಶಾನೆ ತೋರಿಸುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿದ ಪಟ್ಟಣ ಪಂಚಾಯತ್ ಅದ್ಯಕ್ಷೆ ಡಿ.ಪಿ. ಅನುಸೂಯ ಕೃಷ್ಣಮೂರ್ತಿ ಮಾತನಾಡಿ, ಐತಿಹಾಸಿಕ ಮತ್ತು ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಸಂದರ್ಭ ಅಲ್ಲಿನ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು. ಪ್ರವಾಸವನ್ನು ಆನಂದಿಸುವ ಜೊತೆಗೆ ಜ್ಞಾನವೃದ್ಧಿ ಮಾಡಿಕೊಳ್ಳಬೇಕು ಎಂದು ತಿಳಿಸಿ ಪ್ರವಾಸ ಹೊರಟ ಮಕ್ಕಳಿಗೆ ಶುಭ ಹಾರೈಸಿದರು.
ಉಪಾಧ್ಯಕ್ಷ ಎ. ದಿವಾಕರ್ ಮಾತನಾಡಿ ವಿದ್ಯಾರ್ಥಿಗಳು ಪ್ರವಾಸದ ಸಂದರ್ಭದಲ್ಲಿ ಆಹಾರ ಸೇವನೆ ಬಗ್ಗೆ ಜಾಗೃತೆ ವಹಿಸಿ, ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ತಾವು ಪ್ರವಾಸ ಮಾಡಿದ ಸ್ಥಳಗಳ ವಿಶೇಷತೆ, ಜನಜೀವನಗಳ ಕುರಿತು ಒಂದು ಪ್ರವಾಸ ಕಥನವನ್ನು ಬರೆಯಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಗಣಪತಿ ಮಾತನಾಡಿ ಸರ್ಕಾರ ಪ್ರತಿ ತಾಲ್ಲೂಕಿನಿಂದ 50 ಬಾಲಕರು ಮತ್ತು 50 ಬಾಲಕಿಯರು ಸೇರಿದಂತೆ ಒಟ್ಟು 100 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರವಾಸಕ್ಕೆ ಅವಕಾಶ ನೀಡುತ್ತದೆ. ಇದಕ್ಕಾಗಿ ರೂ. 3.5 ಲಕ್ಷ ಅನುದಾನ ನೀಡುತ್ತದೆ. ಪ್ರವಾಸ ಸಂದರ್ಭದಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ, ಉತ್ತಮ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ಟೀಷರ್ಟ್, ಬ್ಯಾಗ್, ಕ್ಯಾಪ್ ನೀಡಲಾಗುತ್ತದೆ. ಐದು ದಿನಗಳ ಪ್ರವಾಸದಲ್ಲಿ ಚಿತ್ರದುರ್ಗ, ಹಂಪೆ, ಹೊಸಪೇಟೆ, ಬಿಜಾಪುರ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಶಿವಮಂದಿರ, ಕೂಡಲಸಂಗಮ, ರಾಕ್ ಗಾರ್ಡನ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಲಾಗುವುದು, ವಿದ್ಯಾರ್ಥಿಗಳ ಭದ್ರತೆ ಮತ್ತು ಸುರಕ್ಷತೆಗಾಗಿ 4 ಮಂದಿ ಶಿಕ್ಷಕರನ್ನು ಕಳುಹಿಸಿಕೊಡುತ್ತಿದ್ದೇವೆ ಎಂದರು.







