ಪಾರಿಕ್ಕರ್ ಗೋವಾ ಸಿ.ಎಂ ಆಗಿ ಮುಂದುವರಿದಿರುವುದು ನಾಚಿಕೆಗೇಡು: ಗೋವಾ ಆರೆಸ್ಸೆಸ್ ಮಾಜಿ ಮುಖ್ಯಸ್ಥ ವೆಲಿಂಗಕರ್
“ಬಿಜೆಪಿ ಸರಕಾರ ವಿಶ್ವಾಸಾರ್ಹವಲ್ಲ”

ಪಣಜಿ,ಜ.10: ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಅಧಿಕಾರದಲ್ಲಿ ಮುಂದುವರಿದಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದು ಗೋವಾ ಆರೆಸ್ಸೆಸ್ ಘಟಕದ ಮಾಜಿ ಮುಖ್ಯಸ್ಥ ಹಾಗೂ ರಾಜಕೀಯ ಸಂಘಟನೆ ಗೋವಾ ಸುರಕ್ಷಾ ಮಂಚ್(ಜಿಎಸ್‌ಎಂ)ನ ಮುಖ್ಯಸ್ಥರೂ ಆಗಿರುವ ಸುಭಾಷ್ ವೆಲಿಂಗಕರ್ ಟೀಕಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,ಗೋವಾಕ್ಕೆ ಉತ್ತಮ ಮುಖ್ಯಮಂತ್ರಿಯನ್ನು ಹೊಂದುವ ಹಕ್ಕು ಇದೆ. ಪರಿಕ್ಕರ್ ಅವರು ಈಗ ವಿಶ್ರಾಂತಿ ಪಡೆಯಬೇಕು. ಅವರಿನ್ನೂ ಅಧಿಕಾರದಲ್ಲಿರುವುದು ನಾಚಿಕೆಗೇಡು ಎಂದರು.
ರಾಜ್ಯದ ಶಿರೋಡಾ ಮತ್ತು ಮಾಡ್ರೆಂ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಉಪಚುನಾವಣೆಗಳಲ್ಲಿ ಜಿಎಸ್‌ಎಂ ಸ್ಪರ್ಧಿಸಲಿದೆ ಎಂದು ಅವರು ತಿಳಿಸಿದರು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಲು ರಾಜೀನಾಮೆ ನೀಡಿದ್ದರಿಂದ ಇವೆರಡೂ ಕ್ಷೇತ್ರಗಳು ತೆರವಾಗಿವೆ.
ನಾವು ಬಿಜೆಪಿಗೆ ತಕ್ಕ ಪಾಠವನ್ನು ಕಲಿಸುತ್ತೇವೆ. ಬಿಜೆಪಿ ನೇತೃತ್ವದ ಸರಕಾರವು ವಿಶ್ವಾಸಕ್ಕೆ ಅರ್ಹವಲ್ಲ. ಅದು ತನ್ನ ಹಲವಾರು ಭರವಸೆಗಳಿಂದ ಹಿಂದೆ ಸರಿದಿದೆ ಎಂದು ವೆಲಿಂಗಕರ್ ಕಿಡಿಕಾರಿದರು.
ಒಂದು ಕಾಲಕ್ಕೆ ಪಾರಿಕ್ಕರ್ ಅವರ ಪ್ರಬಲ ಬೆಂಬಲಿಗರಾಗಿದ್ದ ವೆಲಿಂಗಕರ್ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಲು ರಾಜ್ಯ ಸರಕಾರವು ನಿರ್ಧರಿಸಿದ ಬಳಿಕ ಅವರಿಂದ ದೂರವಾಗಿದ್ದರು. ವೆಲಿಂಗಕರ್ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದ ಗುಂಪಿನ ನಾಯಕರಾಗಿದ್ದರು.







