ಅನ್ವರ್ ಹತ್ಯೆ ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾಖೆ ವಿಫಲ: ಸಹೋದರ ಆರೋಪ
ಜ.25ಕ್ಕೆ ಕುಟುಂಬಸ್ಥರಿಂದ ಉಪವಾಸ ಸತ್ಯಾಗ್ರಹ

ಚಿಕ್ಕಮಗಳೂರು, ಜ.10: ನಗರದಲ್ಲಿ ಕಳೆದ ಏಳು ತಿಂಗಳುಗಳ ಹಿಂದೆ ನಡೆದ ಅನ್ವರ್ ಅವರ ಬರ್ಬರ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಜಿಲ್ಲಾ ಪೊಲೀಸರು ವಿಫಲರಾಗಿದ್ದಾರೆ. ಇನ್ನು 15 ದಿನಗಳೊಳಗೆ ಪೊಲೀಸರು ಹತ್ಯೆ ಪ್ರಕರಣದ ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಬೇಕು. ತಪ್ಪಿದಲ್ಲಿ ಜ.25ರಂದು ಶುಕ್ರವಾರ ಮಧ್ಯಾಹ್ನ ನಗರದ ಆಝಾದ್ ಪಾರ್ಕ್‍ನಲ್ಲಿ ಅನ್ವರ್ ಕುಟುಂಬಸ್ಥರ ನೇತೃತ್ವದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹತ್ಯೆಯಾದ ಅನ್ವರ್ ಸಹೋದರ ಅಬ್ದುಲ್ ಕಬೀರ್ ಎಚ್ಚರಿಸಿದ್ದಾರೆ.
ಗುರುವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್.22ರಂದು ರಾತ್ರಿ ತನ್ನ ಸಹೋದರ ಅನ್ವರ್ ಅವರನ್ನು ದುಷ್ಕರ್ಮಿಗಳು ಡ್ರ್ಯಾಗನ್‍ನಿಂದ ಇರಿದು ಹತ್ಯೆ ಮಾಡಿದ್ದಾರೆ. ಆದರೆ ಈ ಘಟನೆ ನಡೆದು 7 ತಿಂಗಳು ಕಳೆದಿದ್ದರೂ ಜಿಲ್ಲಾ ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ವಿಫಲರಾಗಿದ್ದು, ಹಿಂದಿನ ಎಸ್ಪಿ ಅಣ್ಣಾಮಲೈ ಅವರು, ಪ್ರಕರಣ ತನಿಖೆ ಶೇ.80ರಷ್ಟು ಮುಗಿದಿದ್ದು, ಶೀಘ್ರ ಆರೋಪಿಗಳ ಬಂಧನವಾಗಲಿದೆ ಎಂದು ತಿಳಿಸಿದ್ದರು. ಆದರೆ ಅವರ ವರ್ಗಾವಣೆ ಬಳಿಕ ಈ ಬಗ್ಗೆ ಯಾವುದೇ ಲಭ್ಯವಾಗಿಲ್ಲ. ಅನ್ವರ್ ಅವರನ್ನು ಕಳೆದುಕೊಂಡಿರುವ ನಮ್ಮ ಕುಟುಂಬ ಪ್ರತಿದಿನ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದು, ಕೊಲೆ ಮಾಡಿದವರು, ಮಾಡಿಸಿದವರು ಯಾರೆಂಬುದು ತಿಳಿಯುತ್ತಿಲ್ಲ. ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂಬುದೂ ತಿಳಿಯುತ್ತಿಲ್ಲ. ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ತನಿಖೆಯನ್ನು ನಿರ್ಲಕ್ಷ್ಯಿಸಿದಂತೆ ಕಂಡು ಬರುತ್ತಿದ್ದು, ಶೀಘ್ರ ಆರೋಪಿಗಳ ಬಂಧನವಾಗದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು.
ಅನ್ವರ್ ಹತ್ಯೆ ಪ್ರಕರಣ ಬೇಧಿಸಲು ಉನ್ನತ ಮಟ್ಟದ ತನಿಖೆಗಾಗಿ ಪ್ರಧಾನಿ, ಕೇಂದ್ರದ ಗೃಹಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಸಂಬಂಧಿಸಿದ ಎಲ್ಲ ಜನಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ. ಆದರೆ ಇದುವರೆಗೂ ಪ್ರಕರಣದ ಬಗ್ಗೆ ಸಣ್ಣ ಮಾಹಿತಿಯನ್ನೂ ಪೊಲೀಸರು ನೀಡಿಲ್ಲ. ಹಿಂದಿನ ಎಸ್ಪಿ ಅಣ್ಣಾಮಲೈ ಅವರು 40 ದಿನಗಳೊಳಗೆ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದರು. ಈ ಮಧ್ಯೆ ಅವರು ಮಾನಸ ಸರೋವರಕ್ಕೆ ಕೆಲಸದ ಮೇಲೆ ತರಳಿದ್ದು, ಅಲ್ಲಿಂದ ಬಂದ ಕೂಡಲೇ ಸರಕಾರ ಅವರನ್ನು ಬೇರೆಡೆಗೆ ವರ್ಗಾಯಿಸಿದೆ. ಪ್ರಕರಣ ಬೇಧಿಸಲು 4-5 ತಂಡಗಳನ್ನು ಪೊಲೀಸ್ ಇಲಾಖೆ ನೇಮಿಸಲಾಗಿತ್ತು, ಆದರೆ ಪ್ರಸಕ್ತ ತನಿಖಾ ತಂಡದ ಪೊಲೀಸ್ ಅಧಿಕಾರಿಗಳು ಬೇರೆಡೆ ವರ್ಗಾವಣೆಗೊಂಡಿದ್ದಾರೆ. ತನಿಖಾ ತಂಡದಲ್ಲಿದ್ದ ನಗರ ಠಾಣೆಯ ಎಸ್ಸೈ ರಘು ಅವರನ್ನು ಇತ್ತೀಚೆಗೆ ಅಮಾನತು ಮಾಡಲಾಗಿದೆ. ಈ ವಿದ್ಯಮಾನಗಳು ಪ್ರಕರಣದ ದಿಕ್ಕು ತಪ್ಪಿಸುವ ತಂತ್ರವೆಂಬ ಶಂಕೆ ಮೂಡುತ್ತಿದೆ ಎಂದು ಅವರು ಆರೋಪಿಸಿದರು.
ಪ್ರಕರಣ ಸಂಬಂಧ 15 ದಿನಗಳಿಗೊಮ್ಮೆ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ವಿಚಾರಿಸುತ್ತಿದ್ದೇವೆ. ಆದರೆ ಅವರು ಕೇವಲ ಭರವಸೆ ನೀಡುತ್ತಿದ್ದಾರೆ. ಆರೋಪಿಗಳ ಬಂಧನಕ್ಕೆ ಈ ಹಿಂದೆ ಪ್ರತಿಭಟನೆ, ಧರಣಿ ಮಾಡಿ, ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಲಾಗಿತ್ತು. ಆದರಂತೆ ಇನ್ನು 15 ದಿನಗಳ ಒಳಗೆ ಪ್ರಕರಣದ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಜ.25ರಂದು ಶುಕ್ರವಾರ ಮಧ್ಯಾಹ್ನ 3ಕ್ಕೆ ಅನ್ವರ್ ಕುಟುಂಬಸ್ಥರು, ಅವರ ಸ್ನೇಹಿತರು ಕಾಲ್ನಡಿಗೆಯಲ್ಲಿ ನಗರದ ಆಝಾದ್ ಪಾರ್ಕ್‍ಗೆ ಆಗಮಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಈ ವೇಳೆ ಜೀವ ಹಾನಿ ಸಂಭವಿಸಿದರೆ ಇದಕ್ಕೆ ಪೊಲೀಸ್ ಇಲಾಖೆಯೇ ಹೊಣೆ ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಅನ್ವರ್ ಸಂಬಂಧಿ, ಸ್ನೇಹಿತರಾದ ಬಶೀರ್, ದಾವೂದ್, ಸೈಯದ್, ಅಬ್ದುಲ್ ಲತೀಫ್, ಅಕ್ರಮ್, ಮುಹಮ್ಮದ್ ಸಿರಾಝ್, ಹಮ್ಜಾ, ಮುನೀರ್ ಮತ್ತಿತರರು ಉಪಸ್ಥಿತರಿದ್ದರು.
ಅನ್ವರ್ ಕೊಲೆ ಮಾಡಿಸಿರುವವರ ಬಗ್ಗೆ ಶಂಕೆಗೊಂಡು ತನ್ನ ಕುಟುಂಬದೊಂದೊಗೆ ಧ್ವೇಷ ಸಾಧಿಸುತ್ತಿದ್ದ ಐವರ ವಿರುದ್ಧ ಜೂ.23ರಂದು ಪೊಲೀಸರಿಗೆ ದೂರು ನೀಡಲಾಗಿದೆ. ಎಫ್‍ಐಆರ್ ದಾಖಲಾಗಿದ್ದರೂ ದೂರಿನಲ್ಲಿ ಸೂಚಿಸಿರುವವರನ್ನು ಪೊಲೀಸರು ಬಂಧಿಸಿಲ್ಲ. ಉಪ್ಪಳ್ಳಿಯ ಯೂಸೂಫ್ ಹಾಜಿ ಮತ್ತವರ ಮಕ್ಕಳಾದ ತಯ್ಯುಬ್, ಮನ್ಸೂರ್ ಹಾಗೂ ಉಪ್ಪಳ್ಳಿಯ ನೂರ್ ಮುಹಮ್ಮದ್(ಭದ್ರು), ಮಗ ಫಾರೂಕ್ ಎಂಬವರು ತನ್ನ ಸಹೋದರ ಅನ್ವರ್ ಕೊಲೆಗೆ 10 ವರ್ಷಗಳ ಹಿಂದೆ ವಿಫಲ ಯತ್ನ ನಡೆಸಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆದು ಕೆಲವರಿಗೆ ಜೈಲು ಶಿಕ್ಷೆಯಾಗಿದೆ. ಜೈಲಿಗೆ ಹೋಗುವ ವೇಳೆ ಆರೋಪಿಯೊಬ್ಬ ಅನ್ವರ್ ನನ್ನು ಎರಡು ತಿಂಗಳ ಒಳಗೆ ಹತ್ಯೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದ. ತನ್ನ ಕುಟುಂಬದೊಂದಿಗೆ ಆರಂಭದಿಂದಲೂ ಧ್ವೇಷ ಸಾಧಿಸುತ್ತಿರುವ ಈ ಐವರು ಸುಫಾರಿ ನೀಡಿ ತನ್ನ ಸಹೋದರನನ್ನು ಕೊಲೆ ಮಾಡಿಸಿರುವ ಶಂಕೆ ಇದೆ. ಇವರನ್ನು ಬಂಧಿಸಿ ವಿಚಾರಣೆ ನಡೆಸಿದರೆ ಸತ್ಯ ಹೊರಗೆ ಬರುತ್ತದೆ.
- ಅಬ್ದುಲ್ ಕಬೀರ್, ಹತ್ಯೆಯಾದ ಅನ್ವರ್ ಸಹೋದರ







