ಜಿಎಸ್‌ಟಿ ವಿನಾಯಿತಿ ಮಿತಿ ದುಪ್ಪಟ್ಟು: ಸಣ್ಣ ಉದ್ಯಮಗಳಿಗೆ ನೆಮ್ಮದಿ
ಹೊಸದಿಲ್ಲಿ,ಜ.10: ಸರಕುಗಳು ಮತ್ತು ಸೇವೆಗಳ ತೆರಿಗೆ ಮಂಡಳಿಯು ಗುರುವಾರ ನಡೆದ ತನ್ನ ಸಭೆಯಲ್ಲಿ ಜಿಎಸ್‌ಟಿ ವಿನಾಯಿತಿ ಮಿತಿಯನ್ನು ದುಪ್ಪಟ್ಟುಗೊಳಿಸಲು ನಿರ್ಧರಿಸುವ ಮೂಲಕ ಸಣ್ಣ ಉದ್ಯಮಗಳಿಗೆ ನೆಮ್ಮದಿಯನ್ನು ನೀಡಿದೆ.
ಜಿಎಸ್‌ಟಿ ಮಂಡಳಿಯು ಜಿಎಸ್‌ಟಿ ವಿನಾಯಿತಿ ಮಿತಿಯನ್ನು ಈಶಾನ್ಯ ರಾಜ್ಯಗಳಿಗೆ 20 ಲ.ರೂ.ಗೆ ಮತ್ತು ದೇಶದ ಇತರ ರಾಜ್ಯಗಳಿಗೆ 40 ಲ.ರೂ.ಗೆ ಹೆಚ್ಚಿಸಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳು ಮೌಲ್ಯವರ್ಧನೆಯ ಬದಲು ತಮ್ಮ ವಹಿವಾಟಿನ ಆಧಾರದಲ್ಲಿ ಸಣ್ಣ ಪ್ರಮಾಣದಲ್ಲಿ ತೆರಿಗೆಯನ್ನು ಪಾವತಿಸಲು ಅವಕಾಶ ಕಲ್ಪಿಸಿರುವ ಜಿಎಸ್‌ಟಿ ಸಂಯೋಜನೆ ಯೋಜನೆಯ ಮಿತಿಯನ್ನು ಈಗಿನ ಒಂದು ಕೋ.ರೂ.ನಿಂದ ಒಂದೂವರೆ ಕೋ.ರೂ.ಗೆ ಹೆಚ್ಚಿಸಲಾಗಿದೆ.
ಜಿಎಸ್ ಟಿ ಮಂಡಳಿಯ ಈ ಅವಳಿ ಕ್ರಮಗಳು ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನೆಮ್ಮದಿಯನ್ನು ನೀಡಲಿವೆ ಎಂದು ಜೇಟ್ಲಿ ತಿಳಿಸಿದರು.
ಜಿಎಸ್ ಟಿ ಮಂಡಳಿಯು ಎರಡು ವರ್ಷಗಳವರೆಗೆ ಅಂತರರಾಜ್ಯ ಮಾರಾಟಗಳ ಮೇಲೆ ಶೇ.1ರಂದು ವಿಪತ್ತು ಮೇಲ್ತೆರಿಗೆಯನ್ನು ವಿಧಿಸಲು ಕೇರಳ ಸರಕಾರಕ್ಕೆ ಅನುಮತಿಯನ್ನೂ ನೀಡಿತು.
ಜಿಎಸ್ ಟಿ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್ ಮತ್ತು ಲಾಟರಿ ಸೇರ್ಪಡೆ ಕುರಿತಂತೆ ಸಭೆಯಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಲು ಏಳು ಸದಸ್ಯರ ಸಮಿತಿಯೊಂದನ್ನು ರಚಿಸಲು ಮಂಡಳಿಯು ನಿರ್ಧರಿಸಿದೆ ಎಂದೂ ಜೇಟ್ಲಿ ತಿಳಿಸಿದರು.