ವರ್ಮಾ ನಿರ್ಧಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸಿಬಿಐ ಡಿಎಸ್‌ಪಿ
ಅಧಿಕಾರಿಗಳ ವರ್ಗಾವಣೆ ಆದೇಶಗಳು ರದ್ದು
ಹೊಸದಿಲ್ಲಿ,ಜ.20: ವಿವಿಧ ಅಧಿಕಾರಿಗಳ ವರ್ಗಾವಣೆ ಆದೇಶಗಳನ್ನು ರದ್ದುಗೊಳಿಸುವ ನಿರ್ದೇಶಕ ಅಲೋಕ್ ವರ್ಮಾ ಅವರ ನಿರ್ಧಾರವನ್ನು ಪ್ರಶ್ನಿಸಿ ಸಿಬಿಐ ಡಿಎಸ್‌ಪಿ ದೇವೇಂದ್ರ ಕುಮಾರ್ ಅವರು ಗುರುವಾರ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ಅರ್ಜಿಯು ಶುಕ್ರವಾರ ನ್ಯಾ.ನಜ್ಮಿ ವಝೀರಿ ಅವರ ಮುಂದೆ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಅವರು ಈಗಾಗಲೇ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ,ದೇವೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಮನೋಜ್ ಪ್ರಸಾದ್ ಅವರು ಲಂಚದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ವಿವಿಧ ಅರ್ಜಿಗಳ ಕುರಿತು ತೀರ್ಪನ್ನು ಕಾಯ್ದಿರಿಸಿದ್ದಾರೆ.
ಕುಮಾರ್ ತನ್ನ ಅರ್ಜಿಯಲ್ಲಿ ವರ್ಮಾ ಮತ್ತು ಮರುವರ್ಗಾವಣೆಗೊಂಡ ಇತರ ಅಧಿಕಾರಿಗಳು ತನ್ನ ಮತ್ತು ಇತರರ ವಿರುದ್ಧದ ಎಫ್‌ಐಆರ್‌ನ್ನು ಯಾವುದೇ ರೀತಿಯಲ್ಲಿ ನಿರ್ವಹಿಸಲು ಅವಕಾಶ ನೀಡದಂತೆ ಸಿಬಿಐಗೆ ನಿರ್ದೇಶನವನ್ನು ಕೋರಿದ್ದಾರೆ.
ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರದ ಆದೇಶವನ್ನು ತಳ್ಳಿ ಹಾಕಿದ ಹಿನ್ನೆಲೆಯಲ್ಲಿ 77 ದಿನಗಳ ಕಡ್ಡಾಯ ರಜೆಯ ಬಳಿಕ ವರ್ಮಾ ಬುಧವಾರ ತನ್ನ ಕರ್ತವ್ಯಕ್ಕೆ ಮರಳಿದ್ದಾರೆ.