ಜೀವರಾಜ್ ದಾಖಲಿಸಿದ್ದ ಬ್ಲಾಕ್‌ಮೇಲ್ ಪ್ರಕರಣ: ಜೀವರಾಜ್-ಪೊಲೀಸರಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಜ.10: ತಮ್ಮ ವಿರುದ್ಧ ಡಿ.ಎನ್.ಜೀವರಾಜ್ ಅವರು ದಾಖಲಿಸಿದ್ದ ಬ್ಲಾಕ್‌ಮೇಲ್ ಪ್ರಕರಣ ಕುರಿತು ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಚಿಕ್ಕಮಗಳೂರು ಜಿಲ್ಲೆಯ ಈಚಿಕೆರೆ ಗ್ರಾಮದ ನಿವಾಸಿ ಎಚ್.ಎಂ.ಮನು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣದ ದೂರುದಾರ ಆದ ಮಾಜಿ ಸಚಿವ ಡಿ.ಎನ್.ಜೀವರಾಜ್ ಮತ್ತು ತನಿಖೆ ನಡೆಸಿದ್ದ ನರಸಿಂಹರಾಜಪುರ ಠಾಣಾ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.
ಮನು ವಿರುದ್ಧದ ಪ್ರಕರಣ ಕುರಿತ ನರಸಿಂಹರಾಜಪುರ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಎಂದು ಅವರ ಪರ ವಕೀಲರು ಇದೇ ವೇಳೆ ಕೋರಿದರು. ಆ ಮನವಿ ಪುರಸ್ಕರಿಸಲು ನಿರಾಕರಿಸಿದ ನ್ಯಾಯಪೀಠ, ಅರ್ಜಿಯ ಕುರಿತು ದೂರುದಾರ ಜೀವರಾಜ್ ಹಾಗೂ ಪೊಲೀಸರು ತಮ್ಮ ಆಕ್ಷೇಪಣೆಯನ್ನು ಸಲ್ಲಿಸಲಿ ಎಂದು ತಿಳಿಸಿ ವಿಚಾರಣೆ ಮುಂದೂಡಿತು
ಅನೈತಿಕ ಸಂಬಂಧ ಹೊಂದಿರುವ ಕುರಿತು ಎಚ್.ಎಂ.ಮನು ಅವರು ತಮಗೆ ಬ್ಲಾಕ್‌ಮೇಲ್ ಮಾಡಿ, ಐದು ಕೋಟಿ ಹಣ ನೀಡಲು ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿ 2013ರ ಜುಲೈ 19ರಂದು ಅಂದಿನ ಶೃಂಗೇರಿ ಕ್ಷೇತ್ರದ ಶಾಸಕರಾಗಿದ್ದ ಡಿ.ಎನ್.ಜೀವರಾಜ್ ವಿಧಾನಸೌಧ ಠಾಣಾ ಪೊಲೀಸರಿಗೆ ದೂರು ದಾಖಲಿಸಿದ್ದರು. ನಂತರ ಪ್ರಕರಣ ನರಸಿಂಹರಾಜಪುರ ಠಾಣೆಗೆ ವರ್ಗಾವಣೆಯಾಗಿತ್ತು.
ಪೊಲೀಸರು ಮನು ವಿರುದ್ಧ ತನಿಖೆ ನಡೆಸಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಚಿಕ್ಕಮಗಳೂರು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ತಮ್ಮ ವಿರುದ್ಧದ ಈ ದೂರು ಮತ್ತದರ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಮನು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ. ಜೀವರಾಜ್ ಅವರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ ದೂರು ಸಲ್ಲಿಸಿದ್ದಾರೆ. ಮೇಲಾಗಿ ಪೊಲೀಸರ ಮೇಲೆ ಪ್ರಭಾವ ಬೀರಿ, ಸುಳ್ಳು ದೋಷಾರೋಪ ಪಟ್ಟಿ ಹಾಕಿಸಿದ್ದಾರೆ. ಪೊಲೀಸರು ಪ್ರಕರಣದ ಕುರಿತ ಸೂಕ್ತ ರೀತಿ ತನಿಖೆ ನಡೆಸಿಲ್ಲ. ಹೀಗಾಗಿ, ತಮ್ಮ ವಿರುದ್ಧ ಬ್ಲಾಕ್‌ಮೇಲ್ ಪ್ರಕರಣ ರದ್ದುಪಡಿಸುವಂತೆ ಕೋರಿದ್ದರು.







