ರಾಹುಲ್ ಗಾಂಧಿಗೆ ಮಹಿಳಾ ಆಯೋಗದ ನೋಟಿಸ್
![ರಾಹುಲ್ ಗಾಂಧಿಗೆ ಮಹಿಳಾ ಆಯೋಗದ ನೋಟಿಸ್ ರಾಹುಲ್ ಗಾಂಧಿಗೆ ಮಹಿಳಾ ಆಯೋಗದ ನೋಟಿಸ್](https://www.varthabharati.in/sites/default/files/images/articles/2019/01/10/172187.jpg)
ಹೊಸದಿಲ್ಲಿ, ಜ.10: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕುರಿತ ಅವಹೇಳನಕಾರಿ ಹೇಳಿಕೆಯ ಬಗ್ಗೆ ವಿವರಣೆ ನೀಡುವಂತೆ ತಿಳಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ನೋಟಿಸ್ ಜಾರಿಗೊಳಿಸಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲೂ)ದ ಅಧ್ಯಕ್ಷೆ ರೇಖಾ ಶರ್ಮ ತಿಳಿಸಿದ್ದಾರೆ.
ಸಂಸತ್ತಿನಲ್ಲಿ ರಫೇಲ್ ಒಪ್ಪಂದದ ಬಗ್ಗೆ ತಾನು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಪ್ರಧಾನಿ ಮೋದಿ ಓಡಿಹೋದರು ಮತ್ತು ತನ್ನನ್ನು ಸಮರ್ಥಿಸಿಕೊಳ್ಳಲು ಮಹಿಳೆಯೊಬ್ಬರ (ರಕ್ಷಣಾ ಸಚಿವೆ) ನೆರವು ಯಾಚಿಸಿದರು ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಅವಹೇಳನಕಾರಿಯಾಗಿದ್ದು, ಮಹಿಳೆಯರ ಗೌರವಕ್ಕೆ ಧಕ್ಕೆ ತರುವಂತಿದೆ. ಲಿಂಗ ಭೇದಭಾವದ, ಸ್ತ್ರೀದ್ವೇಷಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ರಾಹುಲ್‌ಗೆ ನೋಟಿಸ್ ಜಾರಿಗೊಳಿಸಲಾಗಿದೆ. ಮಹಿಳೆಯರನ್ನು ಕೀಳಾಗಿ ಭಾವಿಸುವಂತಹ ಹೇಳಿಕೆಯ ಕುರಿತು ರಾಹುಲ್ ರಿಂದ ವಿವರಣೆ ಕೇಳಲಾಗಿದೆ ಎಂದು ರೇಖಾ ಶರ್ಮ ಹೇಳಿದ್ದಾರೆ.
ರಾಹುಲ್ ಅವರ ಹೇಳಿಕೆ ಭಾರತದ ರಾಜಕೀಯ ಕ್ಷೇತ್ರದಲ್ಲಿ ‘ಹೊಸ ಅಸಭ್ಯತೆ’ಯನ್ನು ದಾಖಲಿಸಿದೆ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದರೆ, ಮತ್ತೋರ್ವ ಕೇಂದ್ರ ಸಚಿವೆ ಸ್ಮತಿ ಇರಾನಿ ‘ಸ್ತ್ರೀದ್ವೇಷಿ ರಾಹುಲ್’ ಎಂಬ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ