ಜುಜುಬಿ ವಿಷಯಗಳಿಂದ ವಿಚಾರಣೆ ವಿಳಂಬ: ವಿಎಚ್‌ಪಿ
ಹೊಸದಿಲ್ಲಿ, ಜ.10: ಅಯೋಧ್ಯೆ ಪ್ರಕರಣದ ವಿಚಾರಣೆ ಮುಂದೂಡಿರುವುದನ್ನು ಟೀಕಿಸಿರುವ ವಿಶ್ವಹಿಂದೂ ಪರಿಷದ್ (ವಿಎಚ್‌ಪಿ), ಕೆಲವು ನಿಷ್ಪ್ರಯೋಜಕ, ಜುಜುಬಿ ವಿಷಯಗಳನ್ನು ಮುಂದಿಟ್ಟು ವಿಚಾರಣೆಯನ್ನು ವಿಳಂಬಗೊಳಿಸುವ ತಂತ್ರಗಾರಿಕೆ ನಡೆಸಲಾಗುತ್ತಿದೆ ಎಂದಿದೆ.
ನ್ಯಾ. ಲಲಿತ್ ಐವರು ಸದಸ್ಯರ ನ್ಯಾಯಪೀಠದ ಸದಸ್ಯರಾಗಿರುವುದಕ್ಕೆ ಆಕ್ಷೇಪಣೆ ಎತ್ತಿರುವುದನ್ನು ಉಲ್ಲೇಖಿಸಿದ ವಿಎಚ್‌ಪಿ, ಇದೊಂದು ವಿಳಂಬ ತಂತ್ರವಾಗಿದೆ ಎಂದಿದೆ. ನ್ಯಾ.ಲಲಿತ್ ರಾಮಜನ್ಮಭೂಮಿ ವಿಷಯಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿಲ್ಲ. ಉ.ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಾದಿಸಿದ್ದರು ಎಂದು ವಿಎಚ್‌ಪಿ ಹೇಳಿಕೆಯಲ್ಲಿ ತಿಳಿಸಿದೆ.
ಹೊಸ ಪಂಚಸದಸ್ಯರ ಪೀಠ ಸ್ಥಾಪನೆಗೆ ನ್ಯಾಯಾಂಗ ಆದೇಶ ಹೊರಡಿಸಬೇಕೆಂಬ ಆಕ್ಷೇಪಣೆಯೂ ಸಮ್ಮತಾರ್ಹವಲ್ಲ. ಸಿಜೆಐ ಅವರೇ ಕೊಲಿಜಿಯಂನ ಮುಖ್ಯಸ್ಥರಾಗಿದ್ದಾರೆ. ಅವರಿಗೆ ಪೀಠದ ಸದಸ್ಯರ ಸಂಖ್ಯೆ ಮತ್ತು ಸದಸ್ಯರ ಬಗ್ಗೆ ನಿರ್ಧರಿಸಲು ಅಧಿಕಾರವಿದೆ ಎಂದು ವಿಎಚ್‌ಪಿ ಹೇಳಿದೆ.
ವಿಚಾರಣೆಯನ್ನು ಜ.29ರವರೆಗೆ ಮುಂದೂಡಿರುವುದು ನಿಜಕ್ಕೂ ದೀರ್ಘಾವಧಿಯಾಗಿದೆ. ಅಲ್ಲದೆ ವಿಚಾರಣೆ ನಡೆಸುವ ನ್ಯಾಯಪೀಠದಲ್ಲಿ ಮುಸ್ಲಿಮ್ ನ್ಯಾಯಾಧೀಶರಿಲ್ಲ ಎಂಬ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಇಬ್ಬರು ಸದಸ್ಯರು ಎತ್ತಿರುವ ಆಕ್ಷೇಪಣೆಗಳು ಗೊಂದಲ ಹುಟ್ಟಿಸುವ ಉದ್ದೇಶದ್ದಾಗಿದೆ. ನ್ಯಾಯಾಧೀಶರು ತಮ್ಮ ಧರ್ಮದ ಆಧಾರದಲ್ಲಿ ನ್ಯಾಯ ನಿರ್ಧರಿಸುತ್ತಾರೆ ಎಂದು ಹೇಳಿರುವ ಈ ದಿನ ಅತ್ಯಂತ ನಿರಾಶಾಜನಕ ದಿನವಾಗಿದ್ದು ನ್ಯಾಯಾಂಗದ ಮೇಲೆ ಒತ್ತಡ ಹೇರುವ ಪ್ರಯುತ್ನ ಖಂಡನೀಯ ಎಂದು ವಿಎಚ್‌ಪಿ ತಿಳಿಸಿದೆ.