ಉಡುಪಿ: ಜ.12 ರಿಂದ ರಂಗಭೂಮಿ ನಾಟಕೋತ್ಸವ; ಏರ್ಯರಿಗೆ ರಂಗಭೂಮಿ ಪ್ರಶಸ್ತಿ ಪ್ರದಾನ

ಏರ್ಯ ಲಕ್ಷ್ಮೀನಾರಾಯಣ ಆಳ್ವ
ಉಡುಪಿ, ಜ.10: ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಯಲ್ಲಿ ಒಂದಾದ ರಂಗಭೂಮಿ ಉಡುಪಿ ಜ.12, 13 ಮತ್ತು 14ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಪ್ರಶಸ್ತಿ ಪ್ರದಾನ, 39ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ, ಸ್ಮರಣ ಸಂಚಿಕೆ ಕಲಾಂಜಲಿ ಬಿಡುಗಡೆ ಹಾಗೂ 3 ದಿನಗಳ ನಾಟಕೋತ್ಸವವನ್ನು ಹಮ್ಮಿಕೊಂಡಿದೆ ಎಂದು ರಂಗಭೂಮಿಯ ಹಿರಿಯ ಉಪಾಧ್ಯಕ್ಷ ನಂದಕುಮಾರ್ ಎಂ.ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ರಂಗಭೂಮಿ ಪ್ರಶಸ್ತಿಯನ್ನು ಹಿರಿಯ ಸಂಘಟಕ, ಸಾಂಸ್ಕೃತಿಕ ನೇತಾರ, ವಿದ್ವಾಂಸ ಏರ್ಯ ಲಕ್ಷ್ಮೀನಾರಾಯಣ ಆಳ್ವರಿಗೆ ‘ಸಾಹಿತ್ಯ ಕಲಾಶೇವಧಿ’ ಬಿರುದು ಹಾಗೂ 20,000ರೂ. ಗೌರವ ಧನದೊಂದಿಗೆ ನೀಡಲಾಗುವುದು ಎಂದು ತಿಳಿಸಿದರು.
ಜ.12ರ ಶನಿವಾರ ಸಂಜೆ 4:00ರಿಂದ 5:15ರವರೆಗೆ ಆಳ್ವರೊಂದಿಗೆ ‘ನಾವು-ನೀವು’ ಕಾರ್ಯಕ್ರಮವಿದ್ದು ಅವರ ಬದುಕು ಬರಹದ ಕುರಿತು ವಿಶೇಷ ಉಪನ್ಯಾಸ ಹಾಗೂ ಮುಖಾಮುಖಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಬಳಿಕ ಪ್ರಶಸ್ತಿ ಪ್ರದಾನ ನಡೆಯಲಿದೆ. ಕೊನೆಯಲ್ಲಿ ಬೆಂಗಳೂರಿನ ದೃಶ್ಯ ತಂಡದಿಂದ ‘ಅಭಿಯಾನ’ ನಾಟಕ ಪ್ರಸ್ತುತಗೊಳ್ಳಲಿದೆ.
ಮರುದಿನ ಜ.13ರ ರವಿವಾರ ಸಂಜೆ 5:30ಕ್ಕೆ 39ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ರಂಗಭೂಮಿ ಉಡುಪಿಯ ಈ ವರ್ಷದ ಸ್ಮರಣ ಸಂಚಿಕೆ ‘ಕಲಾಂಜಿಲಿ’ ಬಿಡುಗಡೆಗೊಳ್ಳಲಿದೆ. ನಂತರ ಈ ಬಾರಿ ರಂಗಭೂಮಿ ಕನ್ನಡ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದ ಬೆಂಗಳೂರಿನ ಸಮಸ್ಟಿ ತಂಡದ ನಾಟಕ ‘ಮೊಕ್ಕಾಂ ಪೋಸ್ಟ್ ಬೊಂಬಿಲ್ವಾಡಿ’ ಮರು ಪ್ರದರ್ಶನಗೊಳ್ಳಲಿದೆ.
ಜ.14ರ ಸೋಮವಾರ ಸಂಜೆ 5:30ಕ್ಕೆ ಸಭಾ ಕಾರ್ಯಕ್ರಮದ ನಂತರ ರಂಗಭೂಮಿ ಉಡುಪಿಯ ಮಕ್ಕಳ ತಂಡದಿಂದ ‘ಮಾರಿಕಳೆ’ ನಾಟಕ ಹಾಗೂ ಮಂಗಳೂರಿನ ಸಂತ ಆಗ್ನೆಸ್ ಕನ್ನಡ ರಂಗಭೂಮಿ ತಂಡ ‘ಆಕರಂ’ನಿಂದ ‘ನಿನಗೆ ನೀನೇ ಗೆಳತಿ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದವರು ವಿವರಿಸಿದರು.
ಈ ಎಲ್ಲಾ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿದ್ದು ಕಲಾಸಕ್ತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ನಂದಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜೊತೆ ಕಾರ್ಯದರ್ಶಿ ರವಿರಾಜ್ ಹೆಚ್.ಪಿ., ಸದಸ್ಯರಾದ ಮೇಟಿ ಮುದಿಯಪ್ಪ, ವಿ.ಜಿ.ಶೆಟ್ಟಿ, ಯು. ಗೋಪಾಲ್ ಉಪಸ್ಥಿತರಿದ್ದರು.







