ಎಟಿಎಂಗೆ ನುಗ್ಗಿ ಕಂಪ್ಯೂಟರ್ ಒಡೆದು ಕಳವಿಗೆ ಯತ್ನ: ಆರೋಪಿಯ ಬಂಧನ
ನಗರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ

ಮಂಗಳೂರು, ಜ.10: ನಗರದ ಅತ್ತಾವರ ಸಮೀಪ ಬ್ಯಾಂಕೊಂದರ ಎಟಿಎಂಗೆ ನುಗ್ಗಿದ ವ್ಯಕ್ತಿ ಕಂಪ್ಯೂಟರ್ ಒಡೆದು ಕಳವಿಗೆ ಯತ್ನಿಸಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತೊಕ್ಕೊಟ್ಟು ನಿವಾಸಿ ಜಯರಾಜ್ (44) ಬಂಧಿತ ಆರೋಪಿ.
ಘಟನೆ ವಿವರ: ಗುರುವಾರ ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಅತ್ತಾವರ ಮೊಸರುಕುಡಿಕೆ ಕಟ್ಟೆಯ ಸಮೀಪವಿರುವ ಬ್ಯಾಂಕೊಂದರ ಎಟಿಎಂಗೆ ನುಗ್ಗಿದ ಕಳ್ಳ ಕಂಪ್ಯೂಟರ್ ಮೊನಿಟರ್ ಒಡೆದು ಕಳವಿಗೆ ಯತ್ನಿಸಿದ್ದಾನೆ. ಇದನ್ನು ದೂರದಲ್ಲೇ ಗಮನಿಸಿದ ಸ್ಥಳೀಯರೊಬ್ಬರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ವಿಷಯ ತಿಳಿದು ಕೂಡಲೇ ಪೊಲೀಸರು ಧಾವಿಸಿದಾಗ ಅಷ್ಟೊತ್ತಲ್ಲೇ ಆರೋಪಿಯಿಂದ ಕಳವು ಯತ್ನದಲ್ಲಿ ವಿಫಲನಾಗಿ ಹೊರ ಬಂದು ಸುತ್ತಾಡುತ್ತಿದ್ದ. ಇದನ್ನು ಕಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಪೈಂಟರ್ ಕೆಲಸ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ಹೇಳಿದ್ದಾನೆ. ಆರೋಪಿ ಮುಖಕ್ಕೆ ಮುಸುಕು ಹಾಕಿ ಕಳವಿಗೆ ಯತ್ನಿಸುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಪೊಲೀಸರು ದಾಖಲೆ ವಶಪಡಿಸಿಕೊಂಡಿದ್ದಾರೆ.
ನಗರ ಸೆಂಟ್ರಲ್ ಎಸಿಪಿ ಭಾಸ್ಕರ್ ಒಕ್ಕಲಿಗ ಅವರ ನಿರ್ದೇಶನದಂತೆ ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್, ಪಿಎಸ್ಸೈ ಕ್ರೈಂ ಮಂಜುಳಾ, ಎಚ್‌ಸಿ ರವಿರಾಜ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.







