ಶಿಕ್ಷಣ ಸಚಿವರನ್ನು ನೇಮಿಸದ ರಾಜ್ಯ ಸರಕಾರ: ರಾಜ್ಯಾದ್ಯಂತ ಕ್ಯಾಂಪಸ್ ಫ್ರಂಟ್‌ನಿಂದ ಪ್ರತಿಭಟನೆಗೆ ಕರೆ
ಮಂಗಳೂರು, ಜ.10: ರಾಜ್ಯದ ಪ್ರಮುಖ ಇಲಾಖೆಯಾದ ಶಿಕ್ಷಣ ಇಲಾಖೆಯಲ್ಲಿ ಸಚಿವರಿಲ್ಲದೆ, ಇಲಾಖೆಯೇ ನಿರ್ಜೀವವಾಗಿದೆ. ಇದು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಶಿಕ್ಷಣ ಸಚಿವರನ್ನು ಇನ್ನೂ ನೇಮಿಸದೇ ಇರುವ ರಾಜ್ಯ ಸರಕಾರದ ವಿರುದ್ಧ ರಾಜ್ಯಾದ್ಯಂತ ಕ್ಯಾಂಪಸ್ ಫ್ರಂಟ್‌ನಿಂದ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷ ಮುಹಮ್ಮದ್ ತಪ್ಸೀರ್ ಎಚ್ಚರಿಸಿದ್ದಾರೆ.
ಒಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯವು ಉತ್ತಮವಾಗಿ ರೂಪುಗೊಳ್ಳಲು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಅವಿಭಾಜ್ಯ ಘಟ್ಟವಾಗಿದೆ. ಸುಮಾರು 3 ವರ್ಷದಿಂದ ನಡೆಯುತ್ತಿರುವ ಎಸೆಸೆಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತಿದ್ದು, ಶಿಕ್ಷಣ ಇಲಾಖೆಯನ್ನು ಹದ್ದುಬಸ್ತಿನಲ್ಲಿಟ್ಟು ವ್ಯವಸ್ಥೆಯನ್ನು ಅವಲೋಕನ ನಡೆಸಿ ಪಾರದರ್ಶಕವಾಗಿ ಕಾರ್ಯಾಚರಿಸಲು ಸರಕಾರವು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ರಾಜ್ಯದ ಶಿಕ್ಷಣ ಸಚಿವರಾಗಿದ್ದ ಎನ್.ಮಹೇಶ್ ರಾಜೀನಾಮೆ ಬಳಿಕ ಸಚಿವ ಸಂಪುಟ ವಿಸ್ತರಣೆಗೊಂಡರೂ ಇಂದು ರಾಜಕೀಯ ಕಚ್ಚಾಟದಿಂದ ಸಮರ್ಥ ಸಚಿವರನ್ನು ಇಲಾಖೆಗೆ ನೇಮಿಸದಿರುವುದು ಖಂಡನಾರ್ಹ. ಸರಕಾರವು ರಾಜ್ಯದಲ್ಲಿ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷವಾಗಿ ಯಾವುದೇ ಕೆಲಸಗಳು ನಡೆಸುತ್ತಿಲ್ಲ. ಈಗಾಗಲೇ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಕಾರಿಯಾಗುವ ಉದ್ದೇಶದಿಂದ ಉಚಿತ ಸೈಕಲ್ ಯೋಜನೆಯು ಜಾರಿಯಲ್ಲಿದ್ದು ಶಾಲೆ ಆರಂಭಾವಗಿ ತಿಂಗಳುಗಳೇ ಕಳೆದರೂ ಇನ್ನೂ ರಾಜ್ಯದ ಹಲವಾರು ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸದೆ ಶಾಲೆಗಳಲ್ಲಿ ತುಕ್ಕು ಹಿಡಿಯುತ್ತಿದೆ ಎಂದು ದೂರಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಗಳಲ್ಲಿ 3 ತಿಂಗಳಿನಿಂದ ಪೂರ್ಣಾವಧಿ ನಿರ್ದೇಶಕರಿಲ್ಲದೆ ಹಾಗೂ ಪ್ರಮುಖ ಹುದ್ದೆಗಳಾದ ಜಂಟಿ ನಿರ್ದೇಶಕರು ಮತ್ತು ಉಪನಿರ್ದೇಶಕರಿಲ್ಲದೆ ವ್ಯವಸ್ಥೆಯೇ ಸ್ಥಗಿತಗೊಂಡಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಶಾಲಾ ಮತ್ತು ಕಾಲೇಜುಗಳಲ್ಲಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಕುರಿತು ಗೊಂದಲಕ್ಕೀಡಾಗಿದ್ದಾರೆ. ರಾಜ್ಯ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಗ್ರಹಿಸಿದೆ.







