‘ಆಯುಷ್ಮಾನ್ ಭಾರತ್’ನಲ್ಲಿ ಬಂಗಾಳ ಪಾಲ್ಗೊಳ್ಳದು: ಮಮತಾ ಬ್ಯಾನರ್ಜಿ

ಕೋಲ್ಕತಾ, ಜ.10: ಪ್ರಧಾನಿ ನರೇಂದ್ರ ಮೋದಿಯ ಪ್ರಮುಖ ಆರೋಗ್ಯ ರಕ್ಷಣೆ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆಯಿಂದ ಪಶ್ಚಿಮ ಬಂಗಾಳ ರಾಜ್ಯ ಹೊರಗುಳಿಯಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಮೋದಿ ನೇತೃತ್ವದ ಬಿಜೆಪಿ ಈ ಯೋಜನೆಯ ಅನುಚಿತ ಶ್ರೇಯವನ್ನು ಪಡೆದುಕೊಳ್ಳಲು ಮುಂದಾಗಿರುವುದರಿಂದ ಪಶ್ಚಿಮ ಬಂಗಾಳ ತನ್ನ ಪಾಲಿನ ಶೇ.40ರಷ್ಟು ಹಣವನ್ನು ನೀಡುವುದಿಲ್ಲ ಎಂದು ಬ್ಯಾನರ್ಜಿ ತಿಳಿಸಿದ್ದಾರೆ. ಅವರು ನಾಡಿಯಾ ಜಿಲ್ಲೆಯ ಕೃಷ್ಣಾನಗರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸರಕಾರದ ಜಾಹೀರಾತಿನಲ್ಲಿ ಮೋದಿಯ ಪೋಟೋವನ್ನು ಸರಕಾರ ಮುದ್ರಿಸುತ್ತಿದೆ. ಅಲ್ಲದೆ ಯೋಜನೆಯ ಲಾಂಛನವೂ ಬಿಜೆಪಿಯ ಚಿಹ್ನೆಯನ್ನೇ ಹೋಲುತ್ತದೆ. ಆದ್ದರಿಂದ ಕೇಂದ್ರ ಸರಕಾರವೇ ಯೋಜನೆಯ ಪೂರ್ಣ ಮೊತ್ತವನ್ನು ಪಾವತಿಸಲಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ವಿಶ್ವದ ಅತ್ಯಂತ ದೊಡ್ಡ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆ ಎಂದು ಬಣ್ಣಿಸಲಾಗಿರುವ ಆಯುಷ್ಮಾನ್ ಭಾರತ್ ಯೋಜನೆಯಡಿ 10 ಕೋಟಿ ಬಡಜನರಿಗೆ 5 ಲಕ್ಷ ರೂ. ಮೊತ್ತದಷ್ಟು ಔಷಧಿ ಮತ್ತು ಚಿಕಿತ್ಸಾ ವೆಚ್ಚವನ್ನು ಪಾವತಿಸಲಾಗುವುದು.







